Home ಟಾಪ್ ಸುದ್ದಿಗಳು ಮೂಲಸೌಲಭ್ಯ ಉದ್ಯಮ ದೊಡ್ಡ ಬದಲಾವಣೆ ತರಲಿದೆ : ಮುಖ್ಯಮಂತ್ರಿ ಬೊಮ್ಮಾಯಿ

ಮೂಲಸೌಲಭ್ಯ ಉದ್ಯಮ ದೊಡ್ಡ ಬದಲಾವಣೆ ತರಲಿದೆ : ಮುಖ್ಯಮಂತ್ರಿ ಬೊಮ್ಮಾಯಿ

ಮೂಲಸೌಲಭ್ಯ ಉದ್ಯಮ ದೊಡ್ಡ ಬದಲಾವಣೆ ತರಲಿದೆ. ರಸ್ತೆ, ಗಣಿಗಾರಿಕೆ ಸೇತುವೆ ನಿರ್ಮಾಣ ಸೇರಿದಂತೆ ಎಲ್ಲ ವಲಯಗಳಲ್ಲಿ ಮೂಲಸೌಲಭ್ಯದಿಂದ ದೊಡ್ಡ ಬದಲಾವಣೆ ತರಬಹುದಾಗಿದ್ದು, ಇದಕ್ಕಾಗಿ ಅತ್ಯಾಧುನಿಕ ತಂತ್ರಜ್ಞಾನದ ಬಳಕೆ, ಯಂತ್ರೋಪಕರಣಗಳು ಬಂದಿವೆ. ಇವುಗಳನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ಉದ್ಯಮಿಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಬೆಂಗಳೂರಿನ ಬಿಐಇಸಿಯಲ್ಲಿ ಇಂದಿನಿಂದ ಆರಂಭವಾದ ಕಟ್ಟಡ ನಿರ್ಮಾಣ ಸಲಕರಣೆಗಳ ಎಕ್ಸಕಾನ್ ೨೦೨೨ ವಸ್ತು ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು.

ಕಂಪನಿಗಳ ನಾವೀನ್ಯತೆ, ಹೊಸ ಚಿಂತನೆಗಳ ವಿಚಾರವಿನಿಮಯ ಮಾಡಿಕೊಳ್ಳಲು ಎಕ್ಸ ಕಾನ್ 2022 ವಸ್ತು ಪ್ರದರ್ಶನ ಸೂಕ್ತ ವೇದಿಕೆಯಾಗಿದೆ. ರಾಜ್ಯದಲ್ಲಿ ಹೂಡಿಕೆ ಮಾಡಲಿಚ್ಛಿಸುವ ಉದ್ದಿಮೆಗಳಿಗೆ ಸರ್ಕಾರ ಎಲ್ಲ ರೀತಿಯ ಸಹಕಾರ ನೀಡಲಿದೆ. ಐಟಿಬಿಟಿ, ಸ್ಟಾರ್ಟ್‍ಅಪ್,ಆರ್‍ಎಂಡಿ ಗಳಲ್ಲಿ ರಾಜ್ಯ ಮುಂಚೂಣಿಯಲ್ಲಿದೆ. ಈ ಅವಕಾಶವನ್ನು ಬಳಸಿಕೊಂಡು ಕಂಪನಿಗಳು ರಾಜ್ಯದಲ್ಲಿ ಬಂಡವಾಳ ಹೂಡುವ ಮೂಲಕ ರಾಜ್ಯ ಹಾಗೂ ದೇಶದ ಅಭಿವೃದ್ಧಿಗೆ ಕೊಡುಗೆ ನೀಡಬೇಕು. ಕರ್ನಾಟಕದಲ್ಲಿ ಸರ್ಕಾರಿ ಹಾಗೂ ಖಾಸಗಿ ಸ್ವಾಮ್ಯದ ಸಂಸ್ಥೆಗಳಿವೆ. ಬಿಹೆಚ್‍ಇಎಲ್, ಹೆಚ್ ಎ ಎಲ್ ನಂತಹ ಅನೇಕ ಬೃಹತ್ ಸಂಸ್ಥೆಗಳು ರಾಜ್ಯದಲಿದ್ದು, ರಾಜ್ಯದ ಎಕೋಸಿಸ್ಟಂ ಈ ಸಂಸ್ಥೆಗಳು ಕೊಡುಗೆ ನೀಡಿವೆ ಎಂದರು.

ರಾಜ್ಯದಲ್ಲಿ ಗರಿಷ್ಟ ಸಂಖ್ಯೆಯ ಸ್ಟಾರ್ಟ್ ಅಪ್‍ಗಳಿವೆ. ದೇಶದ ಶೇ.50 ಕ್ಕಿಂತಲೂ ಹೆಚ್ಚಿನ ಸ್ಟಾರ್ಟ್‍ಅಪ್‍ಗಳು ಹಾಗೂ ಯೂನಿಕಾರ್ನ್‍ಗಳು ರಾಜ್ಯದಲ್ಲಿವೆ. ವಿದೇಶಿ ಬಂಡವಾಳ ರಾಜ್ಯಕ್ಕೆ ಹರಿದು ಬಂದಿದೆ. ರಾಜ್ಯದಲ್ಲಿ 400ಕ್ಕೂ ಹೆಚ್ಚು ಖಾಸಗಿ ಮತ್ತು ಸರ್ಕಾರಿ ಸಂಶೋಧನಾ ಕೇಂದ್ರಗಳು ರಾಜ್ಯದಲ್ಲಿದ್ದು, ಅದರಲ್ಲಿ 180 ಬೆಂಗಳೂರಿನಲ್ಲಿದೆ. ಡಿಆರ್‍ಡಿಓ ಸಂಸ್ಥೆ ರಾಜ್ಯಕ್ಕೆ ಕೊಡುಗೆ ನೀಡಿದೆ. ಸೌರಶಕ್ತಿ ಸಂಗ್ರಹಣೆ, ಸೆಮಿಕಂಡಕ್ಟರ್ ಕ್ಷೇತ್ರಕ್ಕೆ ರಾಜ್ಯ ಒತ್ತು ನೀಡುತ್ತಿದೆ. ಕರ್ನಾಟಕವನ್ನು ಅಂತರರಾಷ್ಟ್ರೀಯ ಮಟ್ಟಕ್ಕೇರಿಸಲು ಸರ್ವ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದರು.

ಸಂಶೋಧನೆಗಳು ತಳಹಂತದಿಂದ ನಡೆಯಬೇಕು :
ಹಣದಿಂದ ಹಣ ಬರುವುದಿಲ್ಲ. ದುಡಿಮೆಯಿಂದ ಹಣ ಬರುತ್ತದೆ. ದುಡಿಮೆಯ ತಳಹಂತದಲ್ಲಿರುವವರ ಬಗ್ಗೆ ಕಾಳಜಿ ವಹಿಸಬೇಕು. ತಳಹಂತದ ದುಡಿಯುವ ವರ್ಗಕ್ಕೆ ಸಹಾಯ ಮಾಡಲು ಹೊಸ ಚಿಂತನೆ ಮಾಡಬೇಕು. ಯೋಜನೆಯ ಪ್ರಾಯೋಗಿಕತೆ, ನೈಜ್ಯತೆ ಬಗ್ಗೆ ತಿಳಿಯುವುದೇ ತಳಹಂತದಲ್ಲಿ. ಸಂಶೋಧನೆಗಳು ಈ ಹಂತದಲ್ಲಿ ನಡೆಯಬೇಕು. ಕರ್ನಾಟಕದಲ್ಲಿ ಸಣ್ಣ ಗ್ಯಾರೇಜಿನಿಂದ ಹಿಡಿದು ದೊಡ್ಡ ಕೈಗಾರಿಕೆಗಳವರೆಗೆ ಆರ್ ಎಂಡ್ ಡಿ ನೀತಿಯನ್ನು ಜಾರಿಗೊಳಿಸಲಾಗಿದೆ. ಯುವಕರಲ್ಲಿ ಸ್ವಂತಿಕೆಯನ್ನು ಹಾಗೂ ನಾವೀನ್ಯತೆಯನ್ನು ಪ್ರೋತ್ಸಾಹಿಸಬೇಕು. ಜಪಾನ್ ದೇಶದಂತೆ ಸಂಪೂರ್ಣ ಎಕೋ ಸಿಸ್ಟಂ ಸಂಶೋಧನೆಗೆ ಒತ್ತು ನೀಡುವಂತಿರಬೇಕು. ಸುಸಜ್ಜಿತ ಕ್ಯೂಬಿಕಲ್ಸ್‍ಗಳಲ್ಲಿ ಮಾತ್ರ ಸೀಮಿತವಾಗಿರದೇ, ಸಂಶೋಧನೆಗಳು ಎಲ್ಲೆಡೆ ನಡೆಯಬೇಕು. ಈ ದಿಸೆಯಲ್ಲಿ ಕರ್ನಾಟಕ ನಡೆಯುತ್ತಿದ್ದು, ಹಲವು ವಿನೂತನ ಯೋಜನೆಗಳನ್ನು ರಾಜ್ಯದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು.

ಸವಾಲುಗಳು ಅವಕಾಶಗಳನ್ನು ಒದಗಿಸುತ್ತವೆ :
ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಸಾಂಕ್ರಾಮಿಕವಿದ್ದರೂ ಬೆಳೆಯಲು ಸಾಧ್ಯ ಎಂದು ಜಗತ್ತಿಗೆ ಬಿಂಬಿಸಲಾಗಿದೆ. ಸವಾಲುಗಳು ಅವಕಾಶಗಳನ್ನು ಒದಗಿಸುತ್ತವೆ. ಸವಾಲುಗಳಿಲ್ಲದಿದ್ದರೆ, ಅಭಿವೃದ್ಧಿಯೂ ಇಲ್ಲ. ಸವಾಲುಗಳು ಹೆಚ್ಚಿದ್ದಷ್ಟೂ ಅಭಿವೃದ್ಧಿ ಹೆಚ್ಚಾಗುತ್ತದೆ. ಮೊದಲನೇ ಹಾಗೂ ಎರಡನೇ ವಿಶ್ವಯುದ್ಧಗಳು ಸಾರಿಗೆ, ಎಲೆಕ್ಟ್ರಾನಿಕ್ಸ್, ಮೆಕ್ಯಾನಿಕಲ್ ಕ್ಷೇತ್ರಗಳಲ್ಲಿ ಹೊಸ ತಂತ್ರಜ್ಞಾನಕ್ಕೆ ಎಡೆ ಮಾಡಿಕೊಟ್ಟಿತು. ವಿಶ್ವಯುದ್ದಗಳು ಆಗದಿದ್ದಿದ್ದರೆ ಜಾಗತಿಕ ಬೆಳವಣಿಗೆಯೂ ಆಗುತ್ತಿರಲಿಲ್ಲ. ಯಾವುದೇ ಹೊಸ ಘಟನೆ ಸಂಭವಿಸಿದಾಗ ನೂರು ಹೊಸ ಅವಕಾಶಗಳಿಗೆ ದಾರಿ ಮಾಡಿಕೊಡುತ್ತದೆ ಎಂದರು.
.
ಮೂಲಸೌಕರ್ಯ ಮೂಲಭೂತ ಅವಶ್ಯಕತೆಗಳಲ್ಲಿ ಒಂದಾಗಿದೆ. ಉತ್ತಮ ವೇಗವನ್ನು ಸಾಧ್ಯವಾಗಿಸುವ ಸಾರಿಗೆ ವ್ಯವಸ್ಥೆ ಅಗತ್ಯವಿದೆ. ಕ್ಷಿಪ್ರಗತಿಯಲ್ಲಿ ನಮ್ಮ ಗಮ್ಯವನ್ನು ತಲುಪಿಸುವ ವೇಗವನ್ನು ಹೊಂದಿರುವ ರೈಲುಗಳ ಅಗತ್ಯವಿದೆ. ಮೂಲಸೌಕರ್ಯದ ಪರಿಕಲ್ಪನೆ ಬದಲಾಗಿದೆ. ಎಕ್ಸ್ಕಾನ್ – 11 ನೇ ಆವೃತ್ತಿಯು ಬೆಳೆವಣಿಗೆಯ ರೇಖೆಯಲ್ಲಿ ಅತ್ಯುನ್ನತ ಸ್ಥಾನಕ್ಕೆ ಕೊಂಡಯ್ಯಲು ಸಾಧ್ಯವಿದೆ. ದೇಶಕ್ಕೆ ಲಾಭವಾಗುವಂತೆ ಬೆಳೆಯಬಹುದಾಗಿದೆ ಎಂದರು.

Join Whatsapp
Exit mobile version