ಕಚ್ಚಾವಸ್ತುಗಳ ಬೆಲೆ ಏರಿಕೆ: ಸಂಕಷ್ಟದಲ್ಲಿ ಎಂ.ಎಸ್.ಎಂ.ಇ ವಲಯ: ಸೋಮವಾರ ಪೀಣ್ಯಾದಲ್ಲಿ ಕೈಗಾರಿಕೆಗಳ ಬಂದ್

Prasthutha|

ಬೆಂಗಳೂರು; ಕಿರು, ಸಣ್ಣ ಮತ್ತು ಮದ್ಯಮ ಉದ್ಯಮ ವಲಯದ ಕಚ್ಚಾ ವಸ್ತುಗಳ ಬೆಲೆಯಲ್ಲಿ ಗಣನೀಯ ಏರಿಕೆಯಾಗುತ್ತಿದ್ದು, ಇದರ ವಿರುದ್ಧ ಇದೇ 20 ರ ಸೋಮವಾರದಂದು ಕೈಗಾರಿಕೆಗಳನ್ನು ಬಂದ್ ಮಾಡಿ ತೀವ್ರ ಪ್ರತಿಭಟನೆ ನಡೆಸಲು ಹತ್ತು ಸಾವಿರಕ್ಕೂ ಹೆಚ್ಚು ಸಣ್ಣ ಉದ್ಯಮಗಳ ಸಂಘಟನೆ ಪೀಣ್ಯ ಕೈಗಾರಿಕಾ ಸಂಘ ನಿರ್ಧರಿಸಿದೆ.

- Advertisement -

 ಕಚ್ಚಾವಸ್ತುಗಳ ವಿಪರೀತ ಬೆಲೆ ವಿರುದ್ಧ ಪೀಣ್ಯಾ ಕೈಗಾರಿಕಾ ಸಂಘದ ಜೊತೆಗೆ , ರಾಜಾಜಿನಗರ ಇಂಡಸ್ಟ್ರೀಸ್ ಅಸೋಸಿಯೇಷನ್ , ಬೊಮ್ಮಸಂದ್ರ ಇಂಡಸ್ಟ್ರೀಸ್ ಅಸೋಸಿಯೇಷನ್ , ಬಾನ್ಸಿಯಾ ಮಾಚೋಹಳ್ಳಿ ಇಂಡಸ್ಟ್ರೀಸ್ ಅಸೋಸಿಯೇಷನ್ , ಕರ್ನಾಟಕ ಸ್ಟೇಟ್ ಪಾಲಿಮರ್ಸ್ ಇಂಡಸ್ಟ್ರೀಸ್ ಅಸೋಸಿಯೇಷನ್ , ಮೈಸೂರು ಇಂಡಸ್ಟ್ರೀಸ್ ಅಸೋಸಿಯೇಷನ್ ತಮ್ಮ ಉದ್ಯಮಗಳನ್ನು ಬಂದ್ ಮಾಡಿ ಪ್ರತಿಭಟನೆ ಮಾಡಲು ತೀರ್ಮಾನಿಸಿದೆ.

ಆರ್ಥಿಕ ಹಿನ್ನಡೆ, ಕೋವಿಡ್ ಸಾಂಕ್ರಾಮಿಕದಿಂದ ನೆಲ ಕಚ್ಚಿರುವ ಎಂ.ಎಸ್.ಎಂ.ಇ. ವಲಯಕ್ಕೆ ಇದೀಗ ಕಚ್ಚಾ ವಸ್ತುಗಳ ಬೆಲೆ ಏರಿಕೆ ಭಾರೀ ಹೊಡೆತ ನೀಡಿದ್ದು, ಉಕ್ಕು ತಯಾರಕರು ಮತ್ತು ವರ್ತಕರ ಲಾಬಿಯಿಂದ ಕಚ್ಚಾ ವಸ್ತುಗಳು ಗಗನ ಮುಖಿಯಾಗಿದೆ. ವಾಸ್ತವವಾಗಿ ಉಕ್ಕಿನ ಬೆಲೆ ಕಡಿಮೆ ಇದ್ದು, ಮಾರುಕಟ್ಟೆಯಲ್ಲಿ ಮನಸೋ ಇಚ್ಛೆ ಬೆಲೆ ಏರಿಕೆ ಮಾಡಲಾಗಿದ್ದು, ಉಕ್ಕು ಕಂಪನಿಗಳ ಆದಾಯ ಆಗಸದೆತ್ತರಕ್ಕೆ ಬೆಳೆಯುತ್ತಿದೆ. ಹತ್ತಾರು ಸಾವಿರ ಕೋಟಿ ರೂಪಾಯಿ ಲಾಭಾಂಶವನ್ನು ಪ್ರಕಟಿಸುತ್ತಿವೆ. ಸಣ್ಣ ಮತ್ತು ಮಧ್ಯಮ ಉದ್ಯಮಗಳ ಮೇಲೆ ಹೊರೆ ಹೇರಿ ಲಾಭ ಮಾಡಿಕೊಳ್ಳುತ್ತಿವೆ. ಉಕ್ಕು ಕಂಪೆನಿಗಳ ಹಗಲು ದರೋಡೆಯನ್ನು ವಿರೋಧಿಸಿ ಪೀಣ್ಯಾದಲ್ಲಿರುವ ಆಲ್ ಇಂಡಿಯಾ ಕೌನ್ಸಿಲ್ ಆಫ್ ಅಸೋಸಿಯೇಷನ್ ಆಫ್ ಎಂ.ಎಸ್.ಎಂ.ಇ ಎದುರು ಸಣ್ಣ ಉದ್ಯಮಗಳನ್ನು ಬಂದ್ ಮಾಡಿ ಡಿ.20 ರ ಬೆಳಿಗ್ಗೆ 11 ಗಂಟೆಗೆ ಪ್ರತಿಭಟನೆ ನಡೆಸಲಾಗುವುದು ಎಂದು ಪೀಣ್ಯಾದ ಕೈಗಾರಿಕಾ ಸಂಘದ ಅಧ್ಯಕ್ಷ ಬಿ. ಮುರಳಿ ಕೃಷ್ಣಾ ತಿಳಿಸಿದ್ದಾರೆ.

- Advertisement -

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮಗೆ ಕಾರ್ಯಾದೇಶ ಪಡೆದ ಬೇಡಿಕೆಗಳನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ. ಕಚ್ಚಾ ವಸ್ತುಗಳ ಬೆಲೆ ಗಗನ ಮುಖಿಯಾಗಿದ್ದು, ಶೇ 40 ರಿಂದ ಶೇ 70 ರಷ್ಟು ಹೆಚ್ಚಾಗಿವೆ. ಮನಸೋ ಇಚ್ಚೆಯಾಗಿ ಏರುತ್ತಿರುವ ಬೆಳೆಯನ್ನು ತಗ್ಗಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಕಚ್ಚಾ ವಸ್ತುಗಳು ವಿಪರೀತವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ 170 ಕಿರು, ಸಣ್ಣ, ಮಧ್ಯಮ ಉದ್ಯಮಗಳ ಸಂಘದ ಜತೆಗೂಡಿ ಪ್ಯಾನ್ ಇಂಡಿಯಾ ಜಿಲ್ಲಾಧಿಕಾರಿಗಳ ಕಚೇರಿಗಳ ಮುಂದೆ ಒಂದು ಗಂಟೆ ಪ್ರತಿಭಟನೆಗೆ ಕರೆ ನೀಡಿದೆ. ಇದಕ್ಕೆ ಓಗೊಟ್ಟು ಉದ್ಯಮ ವಲಯವನ್ನು ಸಂರಕ್ಷಿಸಿಕೊಳ್ಳುವ ಉದ್ದೇಶದಿಂದ ಪೀಣ್ಯಾ ಕೈಗಾರಿಕಾ ಸಂಘ ಹೋರಾಟಕ್ಕೆ ಅಣಿಯಾಗಿದೆ ಎಂದರು.

ಕಚ್ಚಾ ವಸ್ತುಗಳ ಬೆಲೆ ಏರಿಕೆ ವಿರುದ್ಧ ರಾಷ್ಟ್ರಮಟ್ಟದಲ್ಲಿ ಒಂದು ದಿನ ಕೈಗಾರಿಕೆಗಳನ್ನು ಸ್ಥಗಿತಗೊಳಿಸಲು ತೀರ್ಮಾನಿಸಲಾಗಿದೆ. ಪೀಣ್ಯಾ ಕೈಗಾರಿಕಾ ಪ್ರದೇಶ ದಕ್ಷಿಣ ಏಷ್ಯಾದಲ್ಲೇ ಅತ್ಯಂತ ದೊಡ್ಡ ಎಂ.ಎಸ್.ಎಂ.ಇ ವಲಯವಾಗಿದ್ದು, 48 ಚದರ ಕಿಲೋಮೀಟರ್ ವ್ಯಾಪ್ತಿಯಲ್ಲಿ 10 ಸಾವಿರಕ್ಕೂ ಹೆಚ್ಚು ಕೈಗಾರಿಕೆಗಳಿವೆ. ಪೀಣ್ಯಾ ಕೈಗಾರಿಕಾ ಸಂಘದಲ್ಲಿ 6,500 ಸದಸ್ಯರು ನೋಂದಣಿಯಾಗಿದ್ದಾರೆ ಎಂದು ಮಾಹಿತಿ ನೀಡಿದರು.

ದೇಶಾದ್ಯಂತ ಕಚ್ಚಾವಸ್ತುಗಳು ಅಸಹಜವಾಗಿ ಏರಿಕೆಯಾಗುತ್ತಿರುವುದು ತೀವ್ರ ಕಳವಳಕ್ಕೆ ಕಾರಣವಾಗಿದೆ. ದೇಶದ ಆರ್ಥಿಕ ಭದ್ರತೆಗೆ ಬುನಾದಿಯಾಗಿರುವ, ಉದ್ಯೋಗ ನೀಡುವ, ಜೀವನಕ್ಕೆ ಆಧಾರವಾಗಿರುವ ಸಣ್ಣ ಮತ್ತು ಮದ್ಯಮ ಉದ್ಯಮ ವಲಯವನ್ನು ರಕ್ಷಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಕ್ಷಣವೇ ಕಾರ್ಯೋನ್ಮುಖವಾಗಬೇಕು ಎಂದು ಅವರು ಹೇಳಿದರು.

ಕೇಂದ್ರ ಸರ್ಕಾ ತಕ್ಷಣಕ್ಕೆ ಆಮದು ಸುಂಕ ಕಡಿತಗೊಳಿಸಿ, ಕಚ್ಚಾ ವಸ್ತುಗಳನ್ನು ರಫ್ತು ಮಾಡುವುದನ್ನು ಸ್ಥಗಿತಗೊಳಿಸಬೇಕು. ಪೀಣ್ಯಾ ವಲಯದಲ್ಲಿ 16 ಸಾವಿರ ಕೈಗಾರಿಕೆಗಳಿದ್ದು, ಲಕ್ಷಾಂತರ ಮಂದಿಗೆ ಉದ್ಯೋಗ ಒದಗಿಸುತ್ತಿದೆ. ಜತೆಗೆ ವಾರ್ಷಿಕ 3,200 ಕೋಟಿ ರೂಪಾಯಿಗೂ ಹೆಚ್ಚು ತೆರಿಗೆ ಪಾವತಿಸುತ್ತಿವೆ ಎಂದು ಬಿ. ಮುರಳಿ ಕೃಷ್ಣಾ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಮಾಜಿ ಅಧ್ಯಕ್ಷ ಸಿ. ಪ್ರಕಾಶ್, ಹಿರಿಯ ಉಪಾಧ್ಯಕ್ಷ ಎಚ್. ಮಂಜುನಾಥ್, ಉಪಾಧ್ಯಕ್ಷ ಎಚ್.ಎಂ. ಅರೀಫ್, ಕಾರ್ಯದರ್ಶಿ ಆರ್. ಶಿವಕುಮಾರ್, ಜಂಟಿ ಕಾರ್ಯದರ್ಶಿ ಆರ್. ಕುಮಾರ್, ಖಜಾಂಚಿ ಡಿ.ಎಚ್. ಪಾಟೀಲ್ ಹಾಗೂ ಜಂಟಿ ಖಜಾಂಚಿ ಕೆ.ಬಿ. ಬಸವರಾಜು ಉಪಸ್ಥಿತರಿದ್ದರು.

Join Whatsapp