ಬೆಂಗಳೂರು: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿ ಮೂತ್ರ ಹಾಗೂ ರಕ್ತ ಪರೀಕ್ಷೆ ನಡೆಸಿದರೆ ಸಾಲದು ಕೂದಲು (ಹೇರ್ ಪೋಲಿಕಲ್) ಇನ್ನಿತರ ಸಮಗ್ರ ಪರೀಕ್ಷೆ ನಡೆಸಬೇಕು ಎಂದು ನಿರ್ಮಾಪಕ ಇಂದ್ರಜಿತ್ ಲಂಕೇಶ್ ಆಗ್ರಹಿಸಿದ್ದಾರೆ. ನಗರದಲ್ಲಿ ಇಂದು ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡ್ರಗ್ಸ್ ಪ್ರಕರಣ ಸಂಬಂಧ ಸೂಕ್ತ ರೀತಿಯ ವೈಜ್ಞಾನಿಕ ತನಿಖೆ ನಡೆಸಬೇಕು ಎಂದು ಹೇಳಿದ್ದಾರೆ.
ನಾನು ಈ ಹಿಂದೆ ಹೇಳಿದಂತೆ ಇದೊಂದು ಇಡೀ ಕರ್ನಾಟಕದ ಇತಿಹಾಸದಲ್ಲಿಯೇ ದೊಡ್ಡ ದಂಧೆ ಆಗಿದೆ. ರಾಜಕೀಯ, ಸಮಾಜ, ಯುವಕ ಹಾಗೂ ಚಿತ್ರರಂಗದ ಆ್ಯಂಗಲ್ ಗಳಿವೆ. ಹೀಗಾಗಿ ನೀವು ಕಳಿಸಿರುವ ಸಂದೇಶದಿಂದ ಯಾರಿಗೂ ಭಯ ಇಲ್ಲ. ಇಂದಿಗೂ ಕೋಟ್ಯಂತರ ರೂ. ಡ್ರಗ್ಸ್ ಕರ್ನಾಟಕ ಮಾತ್ರವಲ್ಲದೇ ಅದರಲ್ಲೂ ಬೆಂಗಳೂರಿನಲ್ಲಿ ಡಂಪ್ ಆಗುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.
ಯಾರನ್ನು ವಿಚಾರಣೆಗೆ ಕರೆದಿದ್ದಾರೆಯೋ ಅವರಿಗೆ ಯಾವುದೇ ರೀತಿಯ ಭಯ ಹುಟ್ಟಿಲ್ಲ. ಕೊರೊನಾ ಎರಡನೇ ಅಲೆಯ ಬಳಿಕ ಅವರು ಮತ್ತೆ ಪಾರ್ಟಿಗಳಲ್ಲಿ ಭಾಗಿಯಾಗುತ್ತಿದ್ದಾರೆ ಎಂದು ಹೇಳಿದರು. ಹಿಂದೆ ಕೆಲವರನ್ನು ಬಂಧನ ಮಾಡಿ ಪರೀಕ್ಷೆ ಮಾಡಲಾಗಿತ್ತು. ಇನ್ನೂ ಕೆಲವರನ್ನು ವಿಚಾರಣೆ ನಡೆಸಿ ಹಾಗೆಯೇ ಬಿಟ್ಟು ಕಳುಹಿಸಲಾಗಿತ್ತು. ಈ ವಿಚಾರದಲ್ಲಿ ಕೆಲವರಿಗೆ ಬೆಣ್ಣೆ, ಇನ್ನೂ ಕೆಲವರಿಗೆ ಸುಣ್ಣ ಎಂಬಂತಾಗಿದ್ದರಿಂದ ಇಂದು ಕೂಡ ಪಾರ್ಟಿಗಳು ನಡೆಯಲು ಕಾರಣವಾಗಿದೆ ಎಂದು ಇಂದ್ರಜಿತ್ ಬೇಸರ ವ್ಯಕ್ತಪಡಿಸಿದರು.