ಬೆಂಗಳೂರು: ಬೆಂಗಳೂರಿಗೆ ಬಂದಿದ್ದ ದಕ್ಷಿಣ ಆಫ್ರಿಕಾದ ಪ್ರಜೆಯೊಬ್ಬರಿಂದ ಭಾರತದಲ್ಲಿ ಮೊದಲ ಒಮಿಕ್ರಾನ್ ಸೋಂಕು ದೃಢಪಟ್ಟಿತ್ತು. ಆದರೆ, ಆತನಿಗೆ ನಕಲಿ ಕೊರೊನಾ ನೆಗೆಟಿವ್ ವರದಿ ನೀಡಿ ಆತ ವಿಮಾನ ಪ್ರಯಾಣದ ಮೂಲಕ ದಕ್ಷಿಣ ಆಫ್ರಿಕಾಕ್ಕೆ ವಾಪಾಸ್ ಹೋಗಲು ಸಹಾಯ ಮಾಡಿದ್ದ ನಾಲ್ವರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಬೊಮ್ಮನಹಳ್ಳಿಯ ಸಾಫ್ಟ್ವೇರ್ ಕಂಪನಿಯ ಉದ್ಯೋಗಿಗಳಾದ ರಾಣೇಶ್, ರವೀಂದ್ರ ಹಾಗೂ ಲ್ಯಾಬ್ ಸಿಬ್ಬಂದಿಗಳಾದ ಮನೋಜ್ ಮತ್ತು ಪ್ರಶಾಂತ್ ಅವರನ್ನು ಬಂಧಿಸಲಾಗಿದೆ.
ಒಮಿಕ್ರಾನ್ ಸೋಂಕಿತ ದಕ್ಷಿಣ ಆಫ್ರಿಕಾದ ಪ್ರಜೆಯೊಬ್ಬರು ತಮ್ಮ ದೇಶಕ್ಕೆ ಅನುಕೂಲವಾಗುವಂತೆ ನಕಲಿ ಕೊವಿಡ್-19 ನೆಗೆಟಿವ್ ಪ್ರಮಾಣಪತ್ರ ಪಡೆಯಲು ಸಹಾಯ ಮಾಡಿದ ನಾಲ್ವರನ್ನು ಬೆಂಗಳೂರಿನ ಹೈಗ್ರೌಂಡ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ದಕ್ಷಿಣ ಆಫ್ರಿಕಾದ ಒಮಿಕ್ರಾನ್ ಸೋಂಕಿತ ಮಾಲೀಕನಾಗಿರುವ ಸಾಫ್ಟ್ವೇರ್ ಕಂಪನಿಯ ಶಾಖೆಯೊಂದು ಬೊಮ್ಮನಹಳ್ಳಿಯಲ್ಲಿದೆ. ಹೀಗಾಗಿ, ಕೆಲಸದ ನಿಮಿತ್ತ ನ. 20ರಂದು ಬೆಂಗಳೂರಿಗೆ ಬಂದಿದ್ದ ಆತನಿಗೆ ಕೊವಿಡ್ ಟೆಸ್ಟ್ ಮಾಡಿದಾಗ ಕೊರೊನಾ ಪಾಸಿಟಿವ್ ಬಂದಿತ್ತು. ಈ ಹಿನ್ನೆಲೆಯಲ್ಲಿ ಅವರಿಗೆ 14 ದಿನಗಳ ಕಾಲ ಶಾಂಗ್ರಿಲಾ ಹೋಟೆಲ್‌ನಲ್ಲಿ ಕ್ವಾರಂಟೈನ್‌ನಲ್ಲಿರಲು ಸೂಚಿಸಲಾಗಿತ್ತು.
ಈ ಹಿನ್ನೆಲೆಯಲ್ಲಿ ಆ ವ್ಯಕ್ತಿಯನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ ಆತ ಕ್ವಾರಂಟೈನ್ನಲ್ಲಿದ್ದ ಹೋಟೆಲ್ನಿಂದ ನ. 27ರಂದೇ ದಕ್ಷಿಣ ಆಫ್ರಿಕಾಗೆ ವಾಪಾಸ್ ತೆರಳಿರುವ ವಿಷಯ ಗೊತ್ತಾಗಿತ್ತು. ಈ ಕುರಿತು ತನಿಖೆ ನಡೆಸಿದಾಗ ಬೆಂಗಳೂರು ಮೂಲದ ಪ್ರಯೋಗಾಲಯದ ಇಬ್ಬರು ಉದ್ಯೋಗಿಗಳು ಹಾಗೂ ಇಬ್ಬರು ಸಾಫ್ಟ್ವೇರ್ ಉದ್ಯೋಗಿಗಳು ಆತನಿಗೆ ಕೊರೊನಾ ನೆಗೆಟಿವ್ ವರದಿಯನ್ನು ಸಿದ್ಧಪಡಿಸಲು ಸಹಾಯ ಮಾಡಿದ್ದು ಹೀಗಾಗಿ, ಆ ನಾಲ್ವರನ್ನು ಬಂಧಿಸಲಾಗಿದೆ.
ನಮ್ಮ ಯೂಟ್ಯೂಬ್ ಚಾನೆಲನ್ನು Subscribe ಮಾಡಿ : Prasthutha News