ನಾಗಪುರ್: ಎಲ್ಲಾ ದೇಶಗಳ ಮೇಲೂ ಆಮದು ಸುಂಕ ಏರಿಸುವುದಾಗಿ ಬೆದರಿಕೆ ಹಾಕುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ದ ಯೋಗ ಗುರು ಮತ್ತು ಉದ್ಯಮಿ ಬಾಬಾ ರಾಮದೇವ್ ಕಿಡಿ ಕಾರಿದ್ದಾರೆ.
ಡೊನಾಲ್ಡ್ ಟ್ರಂಪ್ ಅವರ ನೀತಿಯನ್ನು ತೆರಿಗೆ ಭಯೋತ್ಪಾದನೆ ಎಂದು ಟೀಕಿಸಿದ್ದಾರೆ. ಟ್ರಂಪ್ ಟ್ಯಾರಿಫ್ ಟೆರರಿಸಂನಲ್ಲಿ ಹೊಸ ವಿಶ್ವದಾಖಲೆಯನ್ನೇ ಮಾಡಿದ್ದಾರೆ. ಬಡ ಹಾಗೂ ಅಭಿವೃದ್ಧಿಶೀಲ ದೇಶಗಳನ್ನು ಬೆದರಿಸುವ ಮೂಲಕ ಪ್ರಜಾತಂತ್ರವನ್ನೇ ಹಾಳುಗೆಡವಿದ್ದಾರೆ. ಈ ಟ್ರಂಪ್ ವಿರುದ್ದ ಭಾರತೀಯರು ಒಗ್ಗಟ್ಟಾಗಬೇಕು ಎಂದು ಪತಂಜಲಿ ಸಹ-ಸಂಸ್ಥಾಪಕರು ಕರೆ ನೀಡಿದ್ದಾರೆ.
ಡೊನಾಲ್ಡ್ ಟ್ರಂಪ್ ಅವರ ನೀತಿಯನ್ನು ಸುಂಕ ಭಯೋತ್ಪಾದನೆ ಎಂದು ಜರೆದ ಬಾಬಾ, ಅಷ್ಟಕ್ಕೆ ಸುಮ್ಮನಾಗದೆ, ಆರ್ಥಿಕ ಭಯೋತ್ಪಾದನೆ ಎಂದೂ ಕರೆದಿದ್ದಾರೆ. ಹಾಗೆಯೇ ಈ ಕಾಲಘಟ್ಟವನ್ನು ಬೌದ್ಧಿಕ ವಸಾಹತು ಯುಗ ಎಂದೂ ಆರೋಪಿಸಿದ್ದಾರೆ.
‘ಈ ಸನ್ನಿವೇಶದಲ್ಲಿ ಭಾರತ ಅಭಿವೃದ್ಧಿಯಾಗುವ ಅವಶ್ಯಕತೆ ಇದೆ. ಪ್ರಬಲ ರಾಷ್ಟ್ರ ನಿರ್ಮಾಣಕ್ಕೆ ಎಲ್ಲಾ ಭಾರತೀಯರು ಒಗ್ಗಟ್ಟಾಗಿ, ಈ ವಿನಾಶಕಾರಿ ಶಕ್ತಿಗಳಿಗೆ ತಕ್ಕ ಉತ್ತರ ನೀಡಬೇಕು’ ಎಂದು ಯೋಗ ಗುರು ಹೇಳಿದ್ದಾರೆ.