Home ಗಲ್ಫ್ ಅನಿವಾಸಿ ವೈದ್ಯ, ಸಮಾಜ ಸೇವಕ ಡಾ. ಎ.ಕೆ. ಖಾಸಿಮ್ ನಿಧನಕ್ಕೆ ಇಂಡಿಯನ್ ಸೋಶಿಯಲ್ ಫೋರಂ ಜಿದ್ದಾ...

ಅನಿವಾಸಿ ವೈದ್ಯ, ಸಮಾಜ ಸೇವಕ ಡಾ. ಎ.ಕೆ. ಖಾಸಿಮ್ ನಿಧನಕ್ಕೆ ಇಂಡಿಯನ್ ಸೋಶಿಯಲ್ ಫೋರಂ ಜಿದ್ದಾ ಸಂತಾಪ

ಮಕ್ಕಾದ ಪ್ರತಿಷ್ಠಿತ ಏಷ್ಯನ್ ಹಾಸ್ಪಿಟಲ್ ನ ಮೆಡಿಕಲ್  ಆಫೀಸರ್  ಡಾ. ಖಾದರ್ ಕಾಸಿಂ ರವರು 19 ಮಾರ್ಚ್ 2021ರಂದು ಶುಕ್ರವಾರ  ಹೃದಯಾಘಾತದಿಂದ ನಿಧನರಾಗಿದ್ದು, ಅವರ ಅಕಾಲಿಕ ಮರಣಕ್ಕೆ ಇಂಡಿಯನ್ ಸೋಶಿಯಲ್ ಫೋರಂ ಜಿದ್ದಾ ಸಂತಾಪವನ್ನು ಸೂಚಿಸಿದೆ.

ಮಕ್ಕಾ ನಗರದ ಝಹ್ರತುಲ್ ಕುದಾಯಿ ಏಷಿಯನ್ ಪಾಲಿಕ್ಲಿನಿಕ್ ಆಸ್ಪತ್ರೆಯಲ್ಲಿ ಮುಖ್ಯ ವೈದ್ಯಾಧಿಕಾರಿಯಾಗಿದ್ದ ಉಪ್ಪಳ ಮೂಲದ ಡಾ. ಎ.ಕೆ. ಖಾಸಿಮ್ ಅವರು ಮೂಲತಃ ಕನ್ಯಾನದ ಕಡೂರಿನ ತರವಾಡಿನವರು. ಅವರ ತಂದೆ ಅಬ್ದುಲ್ ಖಾದರ್ ಬಳಿಕ ಉಪ್ಪಳದ ಪೈವಳಿಕೆಯ ಅಟ್ಟೆಗೋಳಿಯಲ್ಲಿ ವಾಸಿಸುತ್ತಿದ್ದರು. ಡಾ. ಖಾಸಿಮ್ ಪ್ರಸ್ತುತ ಮಂಗಳೂರಿನ ಫಳ್ನೀರ್ ನಲ್ಲಿ ಕುಟುಂಬ ಸಹಿತ ವಾಸ ಮಾಡುತ್ತಿದ್ದರು. ಕಳೆದ ಒಂದು ವರ್ಷದ ಹಿಂದೆ ಊರಿಗೆ ಬಂದು ಸೌದಿಗೆ ತೆರಳಿದ್ದರು. ಕಳೆದ 26 ವರ್ಷಗಳಿಂದ ಉಪ್ಪಳ, ಮಂಗಳೂರು, ಸೌದಿ ಅರೇಬಿಯಾದಲ್ಲಿ ವೈದ್ಯಕೀಯ ಸೇವೆ ಸಲ್ಲಿಸಿ ಜನಮನ್ನಣೆ ಗಳಿಸಿದ್ದರು.

ಮಂಗಳೂರು ಕೆ.ಎಂ.ಸಿ.ಯಲ್ಲಿ ಎಂಬಿಬಿಎಸ್ ಮುಗಿಸಿ ಎಮರ್ಜೆನ್ಸಿ ಹೆಲ್ತ್ ಕೋರ್ಸ್ ಮಾಡಿದ್ದರು. ಅಳಿಕೆ ಶ್ರೀಸತ್ಯಸಾಯಿ ಲೋಕಸೇವಾ ವಿದ್ಯಾಸಂಸ್ಥೆಯ ಹಳೆ ವಿದ್ಯಾರ್ಥಿಯಾಗಿದ್ದರು. ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ ಸಹಪಾಠಿಯಾಗಿದ್ದ ಖಾಸಿಮ್ ಅವರ ಜೊತೆ ಅನ್ಯೋನ್ಯವಾಗಿದ್ದರು. ಖಾಸಿಮ್ ಸಂಘಟನಾತ್ಮಕವಾಗಿ ತೊಡಗಿಸಿಕೊಂಡಿದ್ದು, ಮಂಗಳೂರು ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಇದರ ಎನ್ನಾರೈ ಸದಸ್ಯರಾಗಿ ಸಕ್ರಿಯರಾಗಿದ್ದರು. ಎಂ.ಫ್ರೆಂಡ್ಸ್ ನ ಪ್ರತಿಯೊಂದು ಸೇವಾ ಚಟುವಟಿಕೆಗಳಿಗೂ ದೇಣಿಗೆ ನೀಡುತ್ತಿದ್ದರು. ಜಾತಿ ಮತ ನೋಡದೇ ನೂರಾರು ವಿಕಲಾಂಗರಿಗೆ ಗಾಲಿಕುರ್ಚಿ ಪ್ರಾಯೋಜಿಸಿ ಸಂತ್ರಸ್ಥರ ನೋವಿಗೆ ಸ್ಪಂದಿಸಿದ್ದಾರೆ.

ಸೌದಿಗೆ ಉದ್ಯೋಗಕ್ಕೆ ತೆರಳುವ ಮುನ್ನ ಉಪ್ಪಳದ ಕೈಕಂಬದಲ್ಲಿ ಸೊಸೈಟಿ ಆಸ್ಪತ್ರೆ ತೆರೆದು ಬಡರೋಗಿಗಳ ಪಾಲಿಗೆ ನೆರವಾಗುತ್ತಿದ್ದರು. ಮಂಗಳೂರಿನಲ್ಲಿ ಕೂಡಾ ಹಲವಾರು ಕಾರುಣ್ಯ ಯೋಜನೆಯಲ್ಲಿ ಸಕ್ರಿಯರಾಗಿದ್ದರು. ಮಂಗಲ್ಪಾಡಿ ಅರ್ಬನ್ ಸೇವಾ ಸಹಕಾರಿ ಬ್ಯಾಂಕಿನ ಸ್ಥಾಪಕಾಧ್ಯಕ್ಷರಾಗಿದ್ದ ಡಾ. ಖಾಸಿಮ್ ಸರಳ ಸಜ್ಜನಿಕೆಯ ವ್ಯಕ್ತಿತ್ವ ಉಳ್ಳವರು. ಕಳೆದ ಕೆಲ ವರ್ಷಗಳಿಂದ ಪವಿತ್ರ ಮಕ್ಕಾ ನಗರದಲ್ಲಿ ವೈದ್ಯಕೀಯ ಸೇವೆ ಸಲ್ಲಿಸುತ್ತಿದ್ದ ಡಾ. ಖಾಸಿಮ್ ಊರಿನಿಂದ ಅಲ್ಲಿಗೆ ತೆರಳುತ್ತಿದ್ದ ಪ್ರವಾಸಿಗರ ಪಾಲಿಗೆ ಆಪತ್ಬಾಂಧವರಾಗುತ್ತಿದ್ದರು. ಹಜ್ ಸಂದರ್ಭ ಬಡರೋಗಿಗಳ ಶುಶ್ರೂಷೆಯಲ್ಲಿ ದಿನದ 24 ಗಂಟೆಯೂ ಸೇವೆ ಸಲ್ಲಿಸಿ ಪ್ರಶಸ್ತಿಗೆ ಭಾಜನರಾಗಿದ್ದರು. ಕಳೆದ ಬಾರಿ ಊರಿಗೆ ಬರುವ ಸಂದರ್ಭ ಅದೇ ವಿಮಾನದಲ್ಲಿ ಓರ್ವ ಮಹಿಳೆಗೆ ಹೃದಯಾಘಾತವಾದಾಗ ಅವರಿಗೆ ನಿದ್ದೆಗೆಟ್ಟು ವಿಮಾನದಲ್ಲೇ ತುರ್ತು ಚಿಕಿತ್ಸೆ ನೀಡಿ ಮಾನವೀಯತೆ ಮೆರೆದಿದ್ದರು. ಈ ವಿಚಾರ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗಿತ್ತು.

ಅನಿವಾಸಿ ಭಾರತೀಯರ ಸೇವೆಯಲ್ಲಿ ಮುಂಚೂಣಿಯಲ್ಲಿದ್ದ ಡಾ. ಎ.ಕೆ. ಖಾಸಿಮ್ ರವರು ಇಂಡಿಯನ್ ಸೋಷಿಯಲ್ ಫೋರಂನ ಹಿತೈಷಿಯಾಗಿದ್ದರು ಹಾಗೂ ಸಂಘಟನೆಯ ಎಲ್ಲಾ ಸೇವಾ ಕಾರ್ಯಕ್ರಮಗಳನ್ನು ಬೆಂಬಲಿಸುತ್ತಿದ್ದರು. ಅವರ ನಿಧನ ಅನಿವಾಸಿ ಭಾರತೀಯ ಸಮುದಾಯಕ್ಕೆ ನಷ್ಟವನ್ನುಂಟು ಮಾಡಲಿದೆ. ಅಲ್ಲಾಹನು ಅವರ ಎಲ್ಲಾ ಸತ್ಕರ್ಮಗಳನ್ನು ಸ್ವೀಕರಿಸಲಿ ಮತ್ತು ಅವರ ಪಾರತ್ರಿಕ ಜೀವನವನ್ನು ಯಶಸ್ವಿಗೊಳಿಸಲಿ. ಅವರ ಅಗಲುವಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಅಲ್ಲಾಹನು‌ ಆವರ ಕುಟುಂಬಕ್ಕೆ ನೀಡಲಿ ಎಂದು ISF ಜಿದ್ದಾ ಘಟಕ ಹಾರೈಸಿದೆ.

Join Whatsapp
Exit mobile version