ಹೊಸದಿಲ್ಲಿ: ದೇಶವನ್ನು ತೊರೆದು ಇತರ ದೇಶಗಳಲ್ಲಿ ಪೌರತ್ವ ಪಡೆಯುವ ಅತಿ ಶ್ರೀಮಂತರಲ್ಲಿ ಭಾರತೀಯರೇ ಹೆಚ್ಚು ಎಂಬುದು ವರದಿಯಾಗಿದೆ. ಕೋವಿಡ್‌ನಿಂದಾಗಿ ಅಂತರರಾಷ್ಟ್ರೀಯ ಪ್ರಯಾಣಗಳು ಸ್ಥಗಿತಗೊಂಡಿದ್ದರೂ ಇತರ ದೇಶಗಳಲ್ಲಿ ಪೌರತ್ವ ಪಡೆಯುವವರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
2020 ರ ಅಂಕಿಅಂಶಗಳ ಪ್ರಕಾರ ಇತರ ದೇಶಗಳಲ್ಲಿ ಪೌರತ್ವವನ್ನು ಪಡೆಯುವುದರಲ್ಲಿ ಭಾರತೀಯರೇ ಹೆಚ್ಚು. 2019 ರಲ್ಲಿ ಆರನೇ ಸ್ಥಾನದಲ್ಲಿದ್ದ ಅಮೇರಿಕಾ ಈಗ ಎರಡನೇ ಸ್ಥಾನದಲ್ಲಿದೆ. ರಾಜಕೀಯ ಅನಿಶ್ಚಿತತೆಗಳು ಮತ್ತು ಕೋವಿಡ್ ಹರಡುತ್ತಿರುವ ಕಾರಣ ನಾಗರಿಕರು ಅಮೇರಿಕಾ ತ್ಯಜಿಸುವಂತೆ ಪ್ರೇರೇಪಿಸಿದೆ ಎಂಬುದು ವರದಿಯಾಗಿದೆ. ಪಾಕಿಸ್ತಾನ, ದಕ್ಷಿಣ ಆಫ್ರಿಕಾ ಮತ್ತು ನೈಜೀರಿಯಾ ಕ್ರಮವಾಗಿ ಮೂರನೇ, ನಾಲ್ಕನೇ ಮತ್ತು ಐದನೇ ಸ್ಥಾನದಲ್ಲಿವೆ. 2019 ರಲ್ಲಿ 7000 ಶ್ರೀಮಂತರು ಭಾರತವನ್ನು ತೊರೆದಿದ್ದಾರೆ ಎಂದು ಅಂದಾಜಿಸಲಾಗಿದೆ. ಗ್ಲೋಬಲ್ ವೆಲ್ತ್ ಮೈಗ್ರೇಶನ್ ರಿವ್ಯೂ ಪ್ರಕಾರ ಪೌರತ್ವವನ್ನು ತ್ಯಜಿಸಿ ಬೇರೆ ರಾಷ್ಟ್ರಗಳಿಗೆ ವಲಸೆ ಹೋಗುವ ಅತಿ ಶ್ರೀಮಂತರ ಪಟ್ಟಿಯಲ್ಲಿ ಭಾರತ ವಿಶ್ವದ ಎರಡನೇ ರಾಷ್ಟ್ರವಾಗಿತ್ತು. 2020 ರಲ್ಲಿ ಅದು 62.6 ಶೇಕಡಾ ಏರಿದೆ.
ವರದಿಯ ಪ್ರಕಾರ ಹೆಚ್ಚಿನ ಭಾರತೀಯರು ಕೆನಡಾ ಮತ್ತು ಆಸ್ಟ್ರೇಲಿಯಾಕ್ಕೆ ವಲಸೆ ಹೋಗಲು ಬಯಸುತ್ತಾರೆ. ‘ಹೂಡಿಕೆ ಮೂಲಕ ಪೌರತ್ವ’ (citizenship by investment) ಯೋಜನೆಯಡಿ ಹೆಚ್ಚು ಶ್ರೀಮಂತರು ವಲಸೆ ಹೋಗುತ್ತಿದ್ದಾರೆ.