ಬೆಂಗಳೂರು,ಏ.18-ಭಾರತೀಯ ಸೇನಾ ಮುಖ್ಯಸ್ಥರಾಗಿ ಲೆಫ್ಟಿನೆಂಟ್ ಜನರಲ್ ಮನೋಜ್ ಪಾಂಡೆ ನೇಮಕಗೊಂಡಿದ್ದಾರೆ. ಈಗಿರುವ ಜನರಲ್ ಮನೋಜ್ ಮುಕುಂದ್ ನರವಾನೆಯವರ 28 ತಿಂಗಳ ಅಧಿಕಾರ ಅವಧಿ ಏಪ್ರಿಲ್ 30ಕ್ಕೆ ಅಂತ್ಯಗೊಳ್ಳಲಿರುವ ಹಿನ್ನೆಲೆಯಲ್ಲಿ ಮನೋಜ್ ಪಾಂಡೆಯವರನ್ನ ನೇಮಕ ಮಾಡಲಾಗಿದೆ.
ಇವರು ಭಾರತೀಯ ಸೇನೆಯ 29ನೇ ಮುಖ್ಯಸ್ಥರಾಗಿದ್ದಾರೆ. ಇದೀಗ ಮನೋಜನ್ ಪಾಂಡೆ ಮುಂದಿನ ಸೇನಾ ಮುಖ್ಯಸ್ಥರಾಗಿ ನೇಮಕಗೊಂಡಿದ್ದನ್ನು ಭಾರತೀಯ ರಕ್ಷಣಾ ಇಲಾಖೆ ಘೋಷಣೆ ಮಾಡಿದೆ.
ಅಂದಹಾಗೇ, ಮನೋಜ್ ಪಾಂಡೆಯವರು ಕಾರ್ಪ್ ಆಫ್ ಇಂಜಿನಿಯರ್ ವಿಭಾಗದಿಂದ ಸೇನಾ ಮುಖ್ಯಸ್ಥರಾದ ಮೊದಲ ಅಧಿಕಾರಿಯಾಗಿದ್ದಾರೆ.
ನ್ಯಾಶನಲ್ ಡಿಫೆನ್ಸ್ ಅಕಾಡೆಮಿಯ ವಿದ್ಯಾರ್ಥಿಯಾಗಿದ್ದ ಇವರು 1982ರ ಡಿಸೆಂಬರ್ನಲ್ಲಿ ಕಾರ್ಪ್ಸ್ ಆಫ್ ಇಂಜಿನಿಯರ್ಸ್ಗೆ ಸೇರ್ಪಡೆಗೊಂಡರು. ಜಮ್ಮು-ಕಾಶ್ಮೀರದ ಗಡಿ ನಿಯಂತ್ರಣಾ ರೇಖೆ ಬಳಿ ಇರುವ ಪಲ್ಲಾನ್ವಾಲಾ ವಲಯದಲ್ಲಿ ಆಪರೇಶನ್ ಪರಾಕ್ರಮ ನಡೆಸುವಾಗ ಇವರು ಇಂಜಿನಿಯರ್ ರೆಜಿಮೆಂಟ್ನ್ನು ಮುನ್ನಡೆಸಿದ್ದರು.
ಆಪರೇಶನ್ ಪರಾಕ್ರಮ ಎಂಬುದು 2002ರ ಹೊತ್ತಿಗೆ ನಡೆದ ಒಂದು ಕಾರ್ಯಾಚರಣೆಯಾಗಿದೆ. 2001ರಲ್ಲಿ ಭಾರತದ ಸಂಸತ್ತಿನ ಮೇಲೆ ನಡೆದ ಭಯೋತ್ಪಾದಕ ದಾಳಿ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ಸೃಷ್ಟಿಯಾಗುವ ಸನ್ನಿವೇಶವನ್ನು ತಂದಿತ್ತು. ಆ ವೇಳೆ ಪಶ್ಚಿಮದ ಗಡಿಗೆ ಭಾರತೀಯ ಸೇನೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಸಾಗಿಸಿತ್ತು. ಹಾಗೇ, ಹೆಚ್ಚಿನ ಸಂಖ್ಯೆಯಲ್ಲಿ ಸೈನಿಕರನ್ನೂ ಅಲ್ಲಿ ನಿಯೋಜಿಸಲಾಗಿತ್ತು. ಈ ವೇಳೆ ಕಾರ್ಪ್ಸ್ ಆಫ್ ಇಂಜಿನಿಯರ್ ರೆಜಿಮೆಂಟ್ನ್ನು ಮನೋಜ್ ಪಾಂಡೆ ಮುನ್ನಡೆಸಿದ್ದರು.
ಮನೋಜ್ ಪಾಂಡೆ ತಮ್ಮ 39 ವರ್ಷಗಳ ಸೇನಾ ವೃತ್ತಿಯಲ್ಲಿ ಪಶ್ಚಿಮದ ಗಡಿಯ ಇಂಜಿನಿಯರ್ ಬ್ರಿಗೇಡ್, ಎಲ್ಒಸಿ ಬಳಿ ಪದಾತಿ ದಳ, ಲಡಾಖ್ ವಲಯದಲ್ಲಿ ಪರ್ವತ ವಿಭಾಗದ ದಳ ಮತ್ತು ಈಶಾನ್ಯದ ಗಡಿಯಲ್ಲೂ ಒಂದು ಕಾರ್ಪ್ಸ್ನ್ನು ಮುನ್ನಡೆಸಿದ್ದಾರೆ. ಪೂರ್ವ ಕಮಾಂಡ್ನ ಜವಾಬ್ದಾರಿಯನ್ನು ವಹಿಸಿಕೊಳ್ಳುವ ಮೊದಲು ಅಂಡಮಾನ್ ಮತ್ತು ನಿಕೋಬಾರ್ ಕಮಾಂಡ್ನ ಕಮಾಂಡರ್-ಇನ್-ಚೀಫ್ ಆಗಿದ್ದರು.