Home ಟಾಪ್ ಸುದ್ದಿಗಳು ಹಲವು ದಲಿತ ಆಟಗಾರ್ತಿಯರು ಇರುವುದರಿಂದ ಭಾರತೀಯ ಹಾಕಿ ತಂಡ ಒಲಿಂಪಿಕ್ಸ್ ನಲ್ಲಿ ಸೋತಿದೆಯೆಂದು ನಿಂದನೆ

ಹಲವು ದಲಿತ ಆಟಗಾರ್ತಿಯರು ಇರುವುದರಿಂದ ಭಾರತೀಯ ಹಾಕಿ ತಂಡ ಒಲಿಂಪಿಕ್ಸ್ ನಲ್ಲಿ ಸೋತಿದೆಯೆಂದು ನಿಂದನೆ

►ಸಾಧಕಿ ವಂದನಾ ಕಟಾರಿಯಾ ಮನೆ ಮುಂದೆ ವಿಕೃತ ಸಂಭ್ರಮಾಚರಣೆಗೈದ ದುಷ್ಟರು!

ಹರಿದ್ವಾರ: ಭಾರತೀಯ ಮಹಿಳಾ ಹಾಕಿ ತಂಡದ ಪ್ರಮುಖ ಆಟಗಾರ್ತಿ ವಂದನಾ ಕಟಾರಿಯಾ ಅವರು ದಲಿತೆ ಎನ್ನುವ ಕಾರಣಕ್ಕೆ ಜಾತಿ ನಿಂದನೆಗೆ ಒಳಗಾಗಿರುವ ಘಟನೆ ನಡೆದಿದೆ.

ಭಾರತೀಯ ಮಹಿಳಾ ಹಾಕಿ ತಂಡ ಒಲಿಂಪಿಕ್ಸ್‌ ಕ್ರೀಡಾ ಕೂಟದ ಇತಿಹಾಸದಲ್ಲೇ ಮೊದಲ ಬಾರಿಗೆ ಸಮಿಫೈನಲ್ ತಲುಪಿ  ಅರ್ಜೆಂಟೀನಾ ವಿರುದ್ದ 1-2 ಗೋಲ್ ಅಂತರದಲ್ಲಿ ಸೋತಿದ್ದು, ಶುಕ್ರವಾರ (ನಾಳೆ) ಗ್ರೇಟ್‌ ಬ್ರಿಟನ್‌ ತಂಡದ ವಿರುದ್ದ ಕಂಚಿಗಾಗಿ ಸೆಣೆಸಾಟ ನಡೆಸಲಿದೆ. ಆದರೆ ಈ ನಡುವೆ ಒಲಿಂಪಿಕ್ಸ್ ನಲ್ಲಿ ಹ್ಯಾಟ್ರಿಕ್ ಗೋಲ್‌ ಭಾರಿಸಿದ ಭಾರತದ ಮೊದಲ ಮಹಿಳಾ ಹಾಕಿ ಆಟಗಾರ್ತಿ ವಂದನಾ ಕಟಾರಿಯಾ ಅವರು ಜಾತಿ ನಿಂದನೆಗೆ ಒಳಗಾಗಿದ್ದಾರೆ.

ಹರಿದ್ವಾರದ ರೋಷನಾಬಾದ್ ಹಳ್ಳಿಯಲ್ಲಿರುವ ವಂದನಾ ಕಟಾರಿಯಾ ಅವರ ಮನೆಯ ಹತ್ತಿರ ಇಬ್ಬರು ಮೇಲ್ಜಾತಿಯ ವ್ಯಕ್ತಿಗಳು ಆಗಮಿಸಿ ಜಾತಿ ನಿಂದನೆ ಮಾಡಿದ್ದು, ಪಟಾಕಿ ಸಿಡಿಸಿ, ನೃತ್ಯ ಮಾಡಿ,“ತಂಡದಲ್ಲಿ ಹೆಚ್ಚು ದಲಿತ ಆಟಗಾರರು ಇರುವುದರಿಂದಲೇ ಭಾರತ ಸೋತಿದೆ. ಕೇವಲ ಹಾಕಿ ಮಾತ್ರವಲ್ಲ, ಪ್ರತಿ ಕ್ರೀಡೆಯಲ್ಲೂ ದಲಿತರನ್ನು ಹೊರಗಿಡಬೇಕು” ಎಂದು ಜಾತಿ ನಿಂದನೆ ಮಾಡಿದ್ದಾರೆ ಎಂದು ವಂದನಾ ಕುಟುಂಬವು ಆರೋಪಿಸಿದೆ.

 “ಭಾರತ ತಂಡ ಸೋತ ದುಃಖದಲ್ಲಿದ್ದ ನಮಗೆ ಮನೆಯ ಹೊರಗಡೆಯಿಂದ ದೊಡ್ಡ ಶಬ್ದಗಳು ಕೇಳಿ ಬಂದವು. ಹೊರಗೆ ಹೋಗಿ ನೋಡಿದಾಗ ಮೇಲ್ಜಾತಿಯ ಇಬ್ಬರು ವ್ಯಕ್ತಿಗಳು ಮನೆಯ ಮುಂದೆ ಪಟಾಕಿ ಸಿಡಿಸಿ ನೃತ್ಯ ಮಾಡುತ್ತಿದ್ದರು” ಎಂದು ವಂದನಾ ಸಹೋದರ ಶೇಖರ್‌ ಹೇಳಿದ್ದಾರೆ.

Join Whatsapp
Exit mobile version