ನವದೆಹಲಿ : ವಿಶ್ವಸಂಸ್ಥೆಯಲ್ಲಿರುವ ಭಾರತೀಯ ಮೂಲದ ನೌಕರರೊಬ್ಬರು ಮುಂದಿನ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಉಮೇದುವಾರಿಕೆ ಸಲ್ಲಿಸುವುದಾಗಿ ಪ್ರಕಟಿಸಿದ್ದಾರೆ.
ವಿಶ್ವಸಂಸ್ಥೆ ಅಭಿವೃದ್ಧಿ ಕಾರ್ಯಕ್ರಮ (ಯುಎನ್ ಡಿಪಿ)ದಲ್ಲಿ ಲೆಕ್ಕಪತ್ರ ಪರಿಶೋಧನಾ ಸಂಯೋಜಕಿಯಾಗಿರುವ ಆಕಾಂಕ್ಷಾ ಅರೋರ (34) ವಿಶ್ವದ ಅತ್ಯುನ್ನತ ರಾಜತಾಂತ್ರಿಕ ಹುದ್ದೆಯಾಗಿರುವ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಸ್ಪರ್ಧಿಸುತ್ತಿರುವುದಾಗಿ ಘೋಷಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ #AroraForSG ಹ್ಯಾಶ್ ಟ್ಯಾಗ್ ಮೂಲಕ ಪ್ರಚಾರ ಆರಂಭಿಸಿದ್ದಾರೆ.
ಹಾಲಿ ಪ್ರಧಾನ ಕಾರ್ಯದರ್ಶಿಯಾಗಿರುವ 71 ವರ್ಷದ ಆಂಟೋನಿಯೊ ಗುಟೆರಸ್ ಅವರ ಅಧಿಕಾರಾವಧಿ ಈ ವರ್ಷದ ಡಿಸೆಂಬರ್ ನಲ್ಲಿ ಕೊನೆಗೊಳ್ಳಲಿದೆ. ಎರಡನೇ ಅವಧಿಗೆ ಪ್ರಧಾನ ಕಾರ್ಯದರ್ಶಿಯಾಗಿ ಮುಂದುವರಿಯಲು ಗುಟೆರಸ್ ಆಸಕ್ತಿ ತೋರಿದ್ದರು. ಇದರ ನಡುವೆ, ಆಕಾಂಕ್ಷಾ ತಮ್ಮ ಉಮೇದುವಾರಿಕೆ ಪ್ರಕಟಿಸಿದ್ದಾರೆ.
ಆಕಾಂಕ್ಷಾ ಅರೋರ ದೆಹಲಿಯ ಮಥುರಾ ರಸ್ತೆಯ ದೆಹಲಿ ಪಬ್ಲಿಕ್ ಸ್ಕೂಲ್ ನ ಹಳೆ ವಿದ್ಯಾರ್ಥಿನಿ ಮತ್ತು ದೆಹಲಿ ವಿಶ್ವ ವಿದ್ಯಾಲಯದ ಹಂಸ್ ರಾಜ್ ಕಾಲೇಜಿನ ವಾಣಿಜ್ಯ ಪದವೀಧರೆ. ವೃತ್ತಿಯಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಆಗಿರುವ ಆಕಾಂಕ್ಷಾ, ವಿಶ್ವ ಸಂಸ್ಥೆಯ ಜನಸಂಖ್ಯಾ ನಿಧಿ ವಿಭಾಗದಲ್ಲಿ ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಆಕಾಂಕ್ಷಾರ ಕುಟುಂಬ 1947ರಲ್ಲಿ ದೇಶ ವಿಭಜನೆಯ ಬಳಿಕ ಪಾಕಿಸ್ತಾನದಿಂದ ಭಾರತಕ್ಕೆ ಬಂದು ನೆಲೆಸಿತ್ತು. ಅವರು ಭಾರತದಲ್ಲೇ ಜನಿಸಿದ್ದು, ಭಾರತ ಮತ್ತು ಸೌದಿ ಅರೇಬಿಯಾದಲ್ಲಿ ಬೆಳೆದಿದ್ದಾರೆ. ಬಳಿಕ ಅವರು ಕೆನಡಾಕ್ಕೆ ತೆರಳಿದ್ದಾರೆ.