ದುಬೈ: ಏಷ್ಯಾ ಕಪ್ ಟಿ20 ಟೂರ್ನಿಯ ಫೈನಲ್ ಪಂದ್ಯದ ಟಾಸ್ ಪಾಕಿಸ್ತಾನ ಪಾಲಾಗಿದ್ದು, ಶ್ರೀಲಂಕಾ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದೆ. ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುತ್ತಿದ್ದು, ಟಾಸ್ ನಿರ್ಣಾಯಕ ಪಾತ್ರ ವಹಿಸಲಿದೆ.
ಮಹತ್ವದ ಫೈನಲ್ ಪಂದ್ಯಕ್ಕೆ ಶ್ರೀಲಂಕಾ ತಂಡ, ಕಳೆದ ಪಂದ್ಯದಲ್ಲಿ ಆಡಿದ್ದ ತಂಡವನ್ನೇ ಕಣಕ್ಕಿಳಿಸಿದೆ. ಮತ್ತೊಂದೆಡೆ ಪಾಕಿಸ್ತಾನ ತಂಡ ಎರಡು ಬದಲವಾಣೆಗೆ ಮುಂದಾಗಿದ್ದು, ನಸೀಮ್ ಶಾ, ಶಾದಾಬ್ ಖಾನ್ ತಂಡಕ್ಕೆ ಮರಳಿದ್ದಾರೆ. ಅಪ್ಘಾನಿಸ್ತಾನದ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಅಂತಿಮ ಓವರ್‌ನಲ್ಲಿ ಸತತ ಎರಡು ಸಿಕ್ಸರ್ ಬಾರಿಸುವ ಮೂಲಕ ನಸೀಮ್ ಶಾ, ರಾತ್ರೋರಾತ್ರಿ ಸ್ಟಾರ್ ಆಗಿದ್ದರು.
ಎಷ್ಯಾ ಕಪ್‌ನ ಫೈನಲ್ ಹಂತದಲ್ಲಿ ಪಾಕಿಸ್ತಾನ-ಶ್ರೀಲಂಕಾ ತಂಡಗಳು ಇದುವರೆಗೂ ಮೂರು ಬಾರಿ ಮುಖಾಮುಖಿಯಾಗಿದೆ. ಮೂರೂ ಪಂದ್ಯಗಳು ಏಕದಿನ ಮಾದರಿಯಲ್ಲಿ (50 ಓವರ್) ನಡೆದಿದ್ದವು. ಇದರಲ್ಲಿ ಎರಡು ಬಾರಿ ಶ್ರೀಲಂಕಾ ಮತ್ತು ಒಂದು ಬಾರಿ ಪಾಕ್ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ.
1986ರಲ್ಲಿ ಕೊಲಂಬೊದಲ್ಲಿ ನಡೆದಿದ್ದ ಫೈನಲ್ ಪಂದ್ಯವನ್ನು ಶ್ರೀಲಂಕಾ, 5 ವಿಕೆಟ್‌ಗಳಿಂದ ಗೆದ್ದಿತು. ಆ ಬಳಿಕ 2000ದಲ್ಲಿ ಢಾಕಾದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಪಾಕ್, ಲಂಕಾ ತಂಡವನ್ನು 37 ರನ್‌ಗಳಿಂದ ಮಣಿಸಿತ್ತು. ಉಭಯ ತಂಡಗಳು ಫೈನಲ್‌ನಲ್ಲಿ ಕೊನೆಯದಾಗಿ 2014ರಲ್ಲಿ ಶೇರ್-ಎ-ಬಾಂಗ್ಲಾ ಸ್ಟೇಡಿಯಂ, ಮೀರ್ಪುರ್‌ನಲ್ಲಿ ಮುಖಾಮುಖಿಯಾಗಿದ್ದವು. ಈ ಪಂದ್ಯವನ್ನು ಶ್ರೀಲಂಕಾ, 5 ವಿಕೆಟ್‌ಗಳಿಂದ ಗೆದ್ದಿತು. ವಿಪರ್ಯಾಸವೆಂದರೆ 2014ರ ಫೈನಲ್ ಬಳಿಕ ಲಂಕಾ ತಂಡ, ಇದುವರೆಗೂ ಯಾವುದೇ ಮಹತ್ವದ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿಲ್ಲ. !
ಏಷ್ಯಾ ಕಪ್ ಇತಿಹಾಸದಲ್ಲೇ ಇದುವರೆಗೂ ಅತಿಹೆಚ್ಚು ಬಾರಿ ಕಿರೀಟ ಗೆದ್ದ ಕೀರ್ತಿ ಭಾರತದ್ದಾಗಿದೆ. ಒಟ್ಟು ಏಳು ಬಾರಿ ಟೀಮ್ ಇಂಡಿಯಾ, ಏಷ್ಯಾ ಕ್ರಿಕೆಟ್ ಚಾಂಪಿಯನ್ ಆಗಿದೆ. ಎರಡನೇ ಸ್ಥಾನದಲ್ಲಿರುವ ಶ್ರೀಲಂಕಾ ಇದುವರೆಗೆ ಐದು ಬಾರಿ ಏಷ್ಯಾ ಕಪ್ ಗೆದ್ದಿದೆ. (1986, 1997, 2004, 2008 ಮತ್ತು 2014). ಇದೇ ವೇಳೆ ಪಾಕಿಸ್ತಾನ 2000 ಮತ್ತು 2012ರಲ್ಲಿ, ಎರಡು ಬಾರಿ ಪ್ರಶಸ್ತಿ ಗೆದ್ದುಕೊಂಡಿದೆ
ಏಷ್ಯಾದ ಚಾಂಪಿಯನ್ ಪಟ್ಟಕ್ಕೆ ಜಿದ್ದಾಜಿದ್ದಿನ ಹೋರಾಟ ನಿರೀಕ್ಷಿಸಲಾಗಿದೆ. ಫೈನಲ್‌ಗೆ ಪೂರ್ವಭಾವಿಯಾಗಿ ಶುಕ್ರವಾರ ನಡೆದಿದ್ದ ಸೂಪರ್ 4 ಹಂತದ ತಮ್ಮ ಅಂತಿಮ ಪಂದ್ಯದಲ್ಲಿ ಶ್ರೀಲಂಕಾ, ಪಾಕಿಸ್ತಾನವನ್ನು ಐದು ವಿಕೆಟ್‌ಗಳ ಅಂತರದಲ್ಲಿ ಮಣಿಸಿತ್ತು. ಆ ಮೂಲಕ ಫೈನಲ್ ಪಂದ್ಯಕ್ಕೆ ಆತ್ಮವಿಶ್ವಾಸದಿಂದಲೇ ಸಜ್ಜಾಗಿದೆ.
ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಉಭಯ ತಂಡಗಳು ಈವರೆಗೂ 22 ಬಾರಿ ಮುಖಾಮುಖಿಯಾಗಿದ್ದು, 13 ಬಾರಿ ಪಾಕಿಸ್ತಾನ ಗೆಲುವಿನ ನಗೆ ಬೀರಿದ್ದರೆ, 9 ಬಾರಿ ಶ್ರೀಲಂಕಾ ಮೇಲುಗೈ ಸಾಧಿಸಿದೆ.
ಅಂತಿಮ ಪ್ಲೇಯಿಂಗ್ ಇಲೆವೆನ್
ಪಾಕಿಸ್ತಾನ: ಮುಹಮ್ಮದ್ ರಿಝ್ವಾನ್ (ವಿಕೆಟ್ ಕೀಪರ್), ಬಾಬರ್ ಅಝಮ್(ನಾಯಕ), ಫಖರ್ ಝಮಾನ್, ಇಫ್ತಿಕರ್ ಅಹ್ಮದ್, ಖುಷ್ದಿಲ್ ಶಾ, ಮುಹಮ್ಮದ್ ನವಾಝ್, ಶಾದಾಬ್ ಖಾನ್, ಆಸಿಫ್ ಅಲಿ, ಹ್ಯಾರಿಸ್ ರೌಫ್, ನಸೀಮ್ ಶಾ, ಮುಹಮ್ಮದ್ ಹಸ್ನೈನ್
ಶ್ರೀಲಂಕಾ: ಪಾತುಮ್ ನಿಸ್ಸಾಂಕ, ಕುಸಾಲ್ ಮೆಂಡಿಸ್ (ವಿಕೆಟ್ ಕೀಪರ್), ದನುಷ್ಕ ಗುಣತಿಲಕ, ಧನಂಜಯ ಡಿ ಸಿಲ್ವಾ, ಭಾನುಕ ರಾಜಪಕ್ಸೆ, ದಸುನ್ ಶನಕ(ನಾಯಕ), ವನಿಂದು ಹಸರಂಗ, ಚಮಿಕಾ ಕರುಣಾರತ್ನೆ, ಪ್ರಮೋದ್ ಮದುಶನ್, ಮಹೀಶ್ ತೀಕ್ಷಣ, ದಿಲ್ಶನ್ ಮಧುಶಂಕ