ಟೋಕಿಯೋ(ಜು.27): ಆಸ್ಟ್ರೇಲಿಯಾ ವಿರುದ್ಧದ ಹೀನಾಯ ಸೋಲಿನ ನೋವು ಮರೆತು ಮೈದಾನಕ್ಕಿಳಿದ ಭಾರತೀಯ ಹಾಕಿ ತಂಡ, ಸ್ಪೇನ್ ವಿರುದ್ಧ 3-0 ಅಂತರದಲ್ಲಿ ಗೆದ್ದು ಭರ್ಜರಿಯಾಗಿ ಕಮ್’ಬ್ಯಾಕ್ ಮಾಡಿದೆ. ಇದರೊಂದಿಗೆ ಟೋಕಿಯೋ ಒಲಿಂಪಿಕ್ಸ್‌ನ ‘ಎ’ ಗುಂಪಿನಲ್ಲಿ ಮನ್‌ಪ್ರೀತ್ ಸಿಂಗ್ ನೇತೃತ್ವದ ಭಾರತ ಹಾಕಿ ತಂಡವು ಅರ್ಜಿಂಟೀನಾವನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೇರುವಲ್ಲಿ ಯಶಸ್ವಿಯಾಗಿದೆ.
ರೂಪಿಂದರ್ ಪಾಲ್(2) ಹಾಗೂ ಸಿಮ್ರನ್‌ಜಿತ್ ಸಿಂಗ್(1) ಬಾರಿಸಿದ ಆಕರ್ಷಕ ಗೋಲುಗಳ ನೆರವಿನಿಂದ ಭಾರತ ಹಾಕಿ ತಂಡವು ಸುಲಭ ಗೆಲುವು ದಾಖಲಿತು. ಆಸ್ಟ್ರೇಲಿಯಾ ಎದುರು 7-1 ಅಂತರದಲ್ಲಿ ಆಘಾತಕಾರಿ ಸೋಲು ಕಂಡಿದ್ದ ಭಾರತ ಹಾಕಿ ತಂಡವು, ಬಲಿಷ್ಠ ಸ್ಪೇನ್ ಎದುರು ಅಮೋಘ ಪ್ರದರ್ಶನ ತೋರುವ ಮೂಲಕ ಜಯದ ಹಳಿಗೆ ಮರಳುವಲ್ಲಿ ಯಶಸ್ವಿಯಾಗಿದೆ.
ಮೊದಲ ಕ್ವಾರ್ಟರ್‌ನ 9ನೇ ನಿಮಿಷದಲ್ಲಿ ದಿಲ್ಪ್ರೀತ್ ನೀಡಿದ ಉತ್ತಮ ಪಾಸ್ ಅನ್ನು ಸಿಮ್ರನ್‌ಜಿತ್ ಸಿಂಗ್ ಗೋಲಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾದರು. ಇದರೊಂದಿಗೆ ಭಾರತ ಪಂದ್ಯದಲ್ಲಿ ಗೋಲಿನ ಖಾತೆ ತೆರೆಯಿತು. ಇನ್ನು 15ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಗೋಲಾಗಿ ಪರಿವರ್ತಿಸುವಲ್ಲಿ ರೂಪಿಂದರ್ ಪಾಲ್ ಯಶಸ್ವಿಯಾದರು. ಇದರೊಂದಿಗೆ ಮೊದಲ ಕ್ವಾರ್ಟರ್ ಅಂತ್ಯದ ವೇಳೆ ಭಾರತ 2-0 ಮುನ್ನಡೆ ಸಾಧಿಸಿತು.
ಇದಾದ ಬಳಿಕ ಸ್ಪೇನ್ ಚುರುಕಿನ ಆಟಕ್ಕೆ ಮುಂದಾಯಿತಾದರೂ ಗೋಲು ಬಾರಿಸಲು ಭಾರತದ ಗೋಲ್ ಕೀಪರ್ ಶ್ರೀಜೇಶ್ ಅವಕಾಶ ಮಾಡಿಕೊಡಲಿಲ್ಲ. ಪರಿಣಾಮ ಮೊದಲಾರ್ಧ ಮುಕ್ತಾಯದ ವೇಳೆಗೆ ಭಾರತ 2-0 ಮುನ್ನಡೆ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಮೂರನೇ ಕ್ವಾರ್ಟರ್‌ನಲ್ಲಿ ಸ್ಪೇನ್ ತನಗೆ ಸಿಕ್ಕ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಲಿಲ್ಲ. ಇನ್ನು ನಾಲ್ಕನೇ ಕ್ವಾರ್ಟರ್‌ನ 51ನೇ ನಿಮಿಷದಲ್ಲಿ ರೂಪಿಂದರ್ ಪಾಲ್ ಮತ್ತೊಂದು ಗೋಲು ದಾಖಲಿಸುವ ಮೂಲಕ ಭಾರತಕ್ಕೆ 3-0 ಮುನ್ನಡೆ ಒದಗಿಸಿಕೊಟ್ಟರು. ಇದಾದ ಬಳಿಕವೂ ಸ್ಪೇನ್ ಗೋಲು ಗಳಿಸಲು ಸಾಕಷ್ಟು ಬೆವರು ಹರಿಸಿತಾದರೂ ಯಶಸ್ಸು ಮಾತ್ರ ದಕ್ಕಲಿಲ್ಲ.
ಈ ಗೆಲುವಿನೊಂದಿಗೆ ಭಾರತದ ಕ್ವಾರ್ಟರ್ ಫೈನಲ್ ಪ್ರವೇಶದ ಹಾದಿ ಒಂದು ಹಂತಕ್ಕೆ ಸುಗಮ ಎನಿಸಿದೆಯಾದರೂ, ಗುಂಪು ಹಂತದ ಇನ್ನೆರಡು ಪಂದ್ಯಗಳಲ್ಲಿ ಬಲಿಷ್ಠ ಅರ್ಜಿಂಟೀನಾ ಹಾಗೂ ಜಪಾನ್ ತಂಡದ ಸವಾಲನ್ನು ಎದುರಿಸಬೇಕಿದೆ.