ವಿಶ್ವಸಂಸ್ಥೆ : ಇಸ್ರೇಲ್ ಮತ್ತು ಫೆಲಸ್ತೀನ್ ನಡುವೆ ನಡೆಯುತ್ತಿರುವ ಸಂಘರ್ಷದ ಹಿನ್ನೆಲೆಯಲ್ಲಿ ಸ್ವತಂತ್ರ, ಕಾರ್ಯಸಾಧು ಮತ್ತು ಪ್ರಜಾಸತ್ತಾತ್ಮಕ ಫೆಲೆಸ್ತೀನ್ ರಚನೆ” ಪ್ರಸ್ತಾವವನ್ನು ನಾವು ಬೆಂಬಲಿಸುತ್ತೇವೆ ಎಂದು ವಿಶ್ವಸಂಸ್ಥೆಯಲ್ಲಿ ಭಾರತ ಪ್ರಕಟಿಸಿದೆ. ಮಧ್ಯಪ್ರಾಚ್ಯದ ದಶಕದಷ್ಟು ಹಳೆಯ ಸಂಘರ್ಷ ಕೊನೆಗೊಳ್ಳಬೇಕು ಎಂದು ಭಾರತ ಸಲಹೆ ಮಾಡಿದೆ.
“ಇಸ್ರೇಲ್ ಹಾಗೂ ಫೆಲೆಸ್ತೀನ್ ನಡುವಿನ ಶಾಂತಿ ಮಾತುಕತೆ ಮುಂದುವರಿಯಬೇಕು” ಎಂದು ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಅಧಿವೇಶನದಲ್ಲಿ ಸ್ಪಷ್ಟಪಡಿಸಿದೆ. ಈ ಪ್ರದೇಶದಲ್ಲಿ ಶಾಂತಿ ಪುನಃಸ್ಥಾಪನೆಗೆ ‘ಎರಡು ದೇಶಗಳ ಪರಿಹಾರ’ಕ್ಕಿಂತ ಬೇರೆ ಪರ್ಯಾಯ ಇಲ್ಲ ಎಂದು ಅಭಿಪ್ರಾಯಪಟ್ಟಿದೆ.
“ಸ್ವತಂತ್ರ, ಕಾರ್ಯಸಾಧು, ಪ್ರಜಾಸತ್ತಾತ್ಮಕ ಫೆಲೆಸ್ತೀನ್ ರಚನೆಗೆ ಭಾರತ ಬದ್ಧವಾಗಿದೆ. ಅರ್ಥಪೂರ್ಣ ಮತ್ತು ದೀರ್ಘಾವಧಿ ಶಾಂತಿ ನೆಲೆಸಲು ಎರಡು ದೇಶಗಳ ಪರಿಹಾರ ಸೂತ್ರಕ್ಕೆ ಯಾವುದೇ ಪರ್ಯಾಯ ಇಲ್ಲ” ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ (ಪಶ್ಚಿಮ) ವಿಕಾಸ್ ಸ್ವರೂಪ್ ಭದ್ರತಾ ಮಂಡಳಿ ಅಧಿವೇಶನಲ್ಲಿ ಸ್ಪಷ್ಟಪಡಿಸಿದರು.
ಯಥಾಸ್ಥಿತಿಯಲ್ಲಿ ಏಕಪಕ್ಷೀಯವಾಗಿ ಬದಲಿಸುವ ಪ್ರಯತ್ನವು ಪರಸ್ಪರ ಒಪ್ಪಿತ ಎರಡು ದೇಶಗಳ ಪರಿಹಾರ ಸೂತ್ರದ ಪ್ರಯತ್ನಗಳನ್ನು ವಿಫಲಗೊಳಿಸಲಿದ್ದು, ಇದನ್ನು ತಪ್ಪಿಸಬೇಕು ಎಂದು ಸಲಹೆ ಮಾಡಿದರು.