ಏಷ್ಯಾ ಕಪ್‌| ಅಫ್ಘಾನಿಸ್ತಾನ ಗೆಲುವಿಗೆ 213 ರನ್‌ಗಳ ಕಠಿಣ ಗುರಿ

Prasthutha|

ದುಬೈ: ಟೀಮ್‌ ಇಂಡಿಯಾದ ಮಾಜಿ ನಾಯಕ ವಿರಾಟ್‌ ಕೊಹ್ಲಿ, ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಗಳಿಸಿದ ಚೊಚ್ಚಲ ಶತಕದ ಅಬ್ಬರದಲ್ಲಿ ಮಿಂಚಿದ ಟೀಮ್‌ ಇಂಡಿಯಾ, ಏಷ್ಯಾಕಪ್‌ ಸೂಪರ್‌-4 ಹಂತದ ತಮ್ಮ ಅಂತಿಮ ಪಂದ್ಯದಲ್ಲಿ ಅಫ್ಘಾನಿಸ್ತಾನದ ಗೆಲುವಿಗೆ 213ರನ್‌ಗಳ ಕಠಿಣ ಗುರಿ ನಿಗದಿಪಡಿಸಿದೆ.

- Advertisement -

ರೋಹಿತ್‌ ಶರ್ಮಾ ಅನುಪಸ್ಥಿತಿಯಲ್ಲಿ ಹಂಗಾಮಿ ನಾಯಕ ಕೆ.ಎಲ್‌. ರಾಹುಲ್‌ ಮತ್ತು ವಿರಾಟ್‌ ಕೊಹ್ಲಿ ಇನ್ನಿಂಗ್ಸ್‌ ಆರಂಭಿಸಿದ್ದರು. ಮೊದಲನೇ ವಿಕೆಟ್‌ಗೆ  12.4 ಓವರ್‌ಗಳಲ್ಲಿ 119 ರನ್‌ಗಳಿಸಿ ಭದ್ರ ಅಡಿಪಾಯ ಹಾಕಿಕೊಟ್ಟರು. 41 ಎಸೆತಗಳನ್ನು ಎದುರಿಸಿದ ರಾಹುಲ್‌, 2 ಸಿಕ್ಸರ್‌ ಮತ್ತು 6 ಬೌಂಡಿರಿಗಳ ನೆರವಿನಿಂದ 62 ರನ್‌ಗಳಿಸಿ ಫರೀದ್‌ ಅಹ್ಮದ್‌ಗೆ ವಿಕೆಟ್‌ ಒಪ್ಪಿಸಿದರು. ಮೂರನೇ ಕ್ರಮಾಂಕದಲ್ಲಿ ಬಂದ ಸೂರ್ಯಕುಮಾರ್‌ ಯಾದವ್‌ 6 ರನ್‌ಗಳಿಸಿ ನಿರ್ಗಮಿಸಿದರೆ, ರಿಷಭ್‌ ಪಂತ್‌ 20 ರನ್‌ಗಳಿಸಿ ಅಜೇಯರಾಗುಳಿದರು.  ಅಂತಿಮವಾಗಿ ಟೀಮ್‌ ಇಂಡಿಯಾ ಕೇವಲ 2 ವಿಕೆಟ್‌ ನಷ್ಟದಲ್ಲಿ 212 ರನ್‌ಗಳಿಸಿ ಇನ್ನಿಂಗ್ಸ್‌ ಕೊನೆಗೊಳಿಸಿತು.

ಟಿ20 ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ ದಾಖಲಿಸಿದ ವಿರಾಟ್‌ ಕೊಹ್ಲಿ !

- Advertisement -

ಟೀಮ್‌ ಇಂಡಿಯಾದ ಮಾಜಿ ನಾಯಕ ವಿರಾಟ್‌ ಕೊಹ್ಲಿ, ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ ದಾಖಲಿಸಿ ಸಂಭ್ರಮಿಸಿದ್ದಾರೆ. ಅಫ್ಘಾನಿಸ್ತಾನದ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ, ಮೊದಲ ಬಾರಿ ಮೂರಂಕಿಯ ಮೊತ್ತವನ್ನು ತಲುಪಿದ್ದಾರೆ.

ಚುಟುಕು ಮಾದರಿಯಲ್ಲಿ ಮೊದಲನೆಯ ಮತ್ತು ವೃತ್ತಿ ಜೀವನದ 71ನೇ ಶತಕ ಇದಾಗಿದ್ದು, 1020 ದಿನಗಳ ಬಳಿಕ ಕೊಹ್ಲಿ, ಮೈದಾನದಲ್ಲಿ ಮತ್ತೊಮ್ಮೆ ತನ್ನ ಗತ ವೈಭವವನ್ನು ನೆನಪಿಸುವ ರೀತಿಯಲ್ಲಿ ಬ್ಯಾಟ್‌ ಬೀಸಿದ್ದಾರೆ.

ಅಫ್ಘಾನಿಸ್ತಾದ ವಿರುದ್ಧದ ಇಂದಿನ ಪಂದ್ಯದಲ್ಲಿ ಕೆ ಎಲ್ ರಾಹುಲ್‌ ಜೊತೆ ಇನ್ನಿಂಗ್ಸ್‌ ಆರಂಭಿಸಿದ್ದ ಕೊಹ್ಲಿ, 53 ಎಸೆತಗಳಲ್ಲಿ ಶತಕ ಪೂರ್ತಿಗೊಳಿಸಿದರು. ಅಂತಿಮವಾಗಿ 61 ಎಸೆತಗಳಲ್ಲಿ 122 ರನ್‌ಗಳಿಸಿ ಅಜೇಯರಾಗುಳಿದರು. 12 ಬೌಂಡರಿ ಮತ್ತು 6 ಸಿಕ್ಸರ್‌ಗಳು ಈ ಸ್ಮರಣೀಯ ಇನ್ನಿಂಗ್ಸ್‌ ಒಳಗೊಂಡಿತ್ತು. ಸಿಕ್ಸರ್‌ ಮೂಲಕ ಶತಕ ತಲುಪಿದ ಕೊಹ್ಲಿ, ತಮ್ಮ ವಿವಾಹದ ರಿಂಗ್‌ನ್ನು ಚುಂಬಿಸಿ ಸಂಭ್ರಮಿಸಿದರು.

2008ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ಕೊಹ್ಲಿ, ವೃತ್ತಿಜೀವನದ 105ನೇ ಪಂದ್ಯ ಇದಾಗಿದೆ. 2019, ಡಿಸೆಂಬರ್‌ 6ರಂದು ವೆಸ್ಟ್‌ ಇಂಡೀಸ್‌ ವಿರುದ್ಧ ಗಳಿಸಿದ್ದ ಅಜೇಯ 94 ರನ್‌, ಕೊಹ್ಲಿಯ ಇದುವರೆಗಿನ ಅತ್ಯಧಿಕ ಸ್ಕೋರ್‌ ಆಗಿತ್ತು.

Join Whatsapp
Exit mobile version