Home ಕ್ರೀಡೆ ಸೆಂಚುರಿಯನ್ ಟೆಸ್ಟ್: ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ ಐತಿಹಾಸಿಕ ಜಯ

ಸೆಂಚುರಿಯನ್ ಟೆಸ್ಟ್: ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ ಐತಿಹಾಸಿಕ ಜಯ

ಸೆಂಚುರಿಯನ್: ಸೂಪರ್ ಸ್ಪೋರ್ಟ್ಸ್ ಪಾರ್ಕ್‌’ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ 113 ರನ್’ಗಳ ಅಂತರದಲ್ಲಿ ಭರ್ಜರಿ ಗೆಲುವು ಸಾಧಿಸಿದೆ. ಭಾರತ ನೀಡಿದ್ದ 305 ರನ್‌’ಗಳ ಕಠಿಣ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ಎರಡನೇ ಇನ್ನಿಂಗ್ಸ್‌’ನಲ್ಲಿ 191ರನ್‌ಗಳಿಗೆ ಆಲೌಟ್‌ ಆಯಿತು.  4ನೇ ದಿನದಾಟದ ಅಂತ್ಯಕ್ಕೆ 4ವಿಕೆಟ್ ನಷ್ಟದಲ್ಲಿ 94 ರನ್’ಗಳಿಸಿದ್ದ ಅತಿಥೇಯರು ಅಂತಿಮ ದಿನದಾಟದಲ್ಲಿ ಕೇವಲ 97 ರನ್’ಗಳಿಸಲಷ್ಟೇ ಶಕ್ತರಾದರು.

ದಕ್ಷಿಣ ಆಫ್ರಿಕಾ ನಾಯಕ ಡೀನ್ ಎಲ್ಗರ್ ಏಕಾಂಗಿ ಹೋರಾಟ ನಡೆಸಿ 77 ರನ್’ಗಳಿಸಿದರೆ, ಮೊದಲ ಇನ್ನಿಂಗ್ಸ್’ನಲ್ಲಿ ಅರ್ಧಶತಕ ಗಳಿಸಿದ್ದ ತೆಂಬ ಬವುಮಾ 35 ರನ್’ಗಳಿಸಿ ಅಜೇಯರಾಗುಳಿದರು. ಭಾರತದ ಪರ ಮುಹಮ್ಮದ್ ಶಮಿ ಹಾಗೂ ಜಸ್ಪ್ರೀತ್ ಬುಮ್ರಾ ತಲಾ 3 ವಿಕೆಟ್ ಪಡೆದರೆ, ಮುಹಮ್ಮದ್ ಸಿರಾಜ್ ಹಾಗೂ ಆರ್. ಆಶ್ವಿನ್ ತಲಾ 2 ವಿಕೆಟ್ ಪಡೆದರು. ಈ ಗೆಲುವಿನೊಂದಿಗೆ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಕೊಹ್ಲಿ ಪಡೆ 1-0 ಮುನ್ನಡೆ ಪಡೆದುಕೊಂಡಿದೆ.

ನಾಯಕನ ನಿರ್ಗಮನದ ಬಳಿಕ ಆಫ್ರಿಕಾ ಪತನ ಆರಂಭ !
ಕ್ಯಾಪ್ಟನ್ ಡೀನ್ ಎಲ್ಗರ್ ನಿರ್ಗಮಿಸಿದ ಬಳಿಕ ದಕ್ಷಿಣ ಆಫ್ರಿಕಾ ಪತನ ಆರಂಭವಾಯಿತು. ಆಫ್ರಿಕಾದ ಮಧ್ಯಮ ಕ್ರಮಾಂಕ ಹಾಗೂ ಕೆಳಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಯಾವುದೇ ಹೋರಾಟ ಪ್ರದರ್ಶಿಸಲಿಲ್ಲ. ಕ್ವಿಂಟರ್ ಡಿಕಾಕ್ 21 ರನ್’ಗಳಿಸಿ ಸಿರಾಜ್‌ಗೆ ವಿಕೆಟ್ ಒಪ್ಪಿಸಿದ್ರೆ, ವಿಯಾನ್ ಮುಲ್ಡರ್ ಕೇವಲ 1ರನ್‌ಗೆ ಹಾಗೂ ಮಾರ್ಕೊ ಜಾನ್ಸನ್ 13ರನ್‌ಗಳಿಸಿ ಮುಹಮ್ಮದ್ ಶಮಿಗೆ ವಿಕೆಟ್ ಒಪ್ಪಿಸಿದರು. ಭೋಜನ ವಿರಾಮದ ವೇಳೆಗೆ 7 ವಿಕೆಟ್ ಕಳೆದುಕೊಂಡಿದ್ದ ಆಫ್ರಿಕಾ, ಗೆಲುವಿಗೆ 123ರನ್‌’ಗಳನ್ನು ಗಳಿಸಬೇಕಿತ್ತು.  ಬೇಕಿತ್ತು.  ಸೂಪರ್ ಸ್ಪೋರ್ಟ್ಸ್ ಪಾರ್ಕ್‌’ನಲ್ಲಿ ವಿಕೆಟ್ ಪಡೆಯದೆ ನಿರಾಸೆಯಲ್ಲಿದ್ದ ಆರ್. ಅಶ್ವಿನ್ ಆಫ್ರಿಕಾದ ಅಂತಿಮ ಎರಡು ವಿಕೆಟ್ ಕಬಳಿಸಿ ನಿರಾಳರಾದರು.  

ದಕ್ಷಿಣ ಆಫ್ರಿಕಾ ವಿರುದ್ಧ 17ನೇ ಟೆಸ್ಟ್‌ ಪಂದ್ಯ ಗೆದ್ದ ಕೊಹ್ಲಿ !

ದಕ್ಷಿಣ ಆಪ್ರಿಕಾ ವಿರುದ್ಧ ಅತಿ ಹೆಚ್ಚು ಟೆಸ್ಟ ಪಂದ್ಯ ಗೆದ್ದ ಭಾರತದ ನಾಯಕ ಎಂಬ ಹೆಗ್ಗಳಿಕೆಗೆ ವಿರಾಟ್ ಕೊಹ್ಲಿ ಪಾತ್ರರಾಗಿದ್ದು, ಧೋನಿ ದಾಖಲೆ ಸರಿಗಟ್ಟಿದ್ದಾರೆ. ಹರಿಣಗಳ ವಿರುದ್ಧ 17ನೇ ಟೆಸ್ಟ್ ಪಂದ್ಯ ಗೆದ್ದ ಕೊಹ್ಲಿ, ಎರಡು ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯ ಗೆದ್ದ ಮೊದಲ ನಾಯಕರಾಗಿದ್ದಾರೆ. ಇದಲ್ಲದೆ, ಸೆಂಚುರಿಯನ್ ಮೈದಾನದಲ್ಲಿ ಟೆಸ್ಟ್ ಪಂದ್ಯ ಗೆದ್ದ ಏಷ್ಯಾದ ಮೊದಲ ನಾಯಕ ಎಂಬ ಸಾಧನೆ ಮಾಡಿದ್ದಾರೆ.

Join Whatsapp
Exit mobile version