Home ಕ್ರೀಡೆ ಏಷ್ಯನ್ ಹಾಕಿ ಚಾಂಪಿಯನ್ಸ್ ಟ್ರೋಫಿ: ಪಾಕಿಸ್ತಾನ ಸವಾಲನ್ನು ಮೆಟ್ಟಿನಿಂತು ಕಂಚಿನ ಪದಕ ಗೆದ್ದ ಭಾರತ

ಏಷ್ಯನ್ ಹಾಕಿ ಚಾಂಪಿಯನ್ಸ್ ಟ್ರೋಫಿ: ಪಾಕಿಸ್ತಾನ ಸವಾಲನ್ನು ಮೆಟ್ಟಿನಿಂತು ಕಂಚಿನ ಪದಕ ಗೆದ್ದ ಭಾರತ

ಢಾಕಾ: ಏಷ್ಯನ್ ಹಾಕಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಭಾರತ ತಂಡ ಕಂಚಿನ ಪದಕವನ್ನು ಮುಡಿಗೇರಿಸಿಕೊಂಡಿದೆ. ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು 4-3 ಅಂತರದಲ್ಲಿ ರೋಚಕವಾಗಿ ಸೋಲಿಸುವಲ್ಲಿ ಭಾರತ ಯಶಸ್ವಿಯಾಗಿದೆ.

ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದ ಭಾರತೀಯ ಹಾಕಿ ತಂಡ ಏಷ್ಯನ್ ಚಾಂಪಿಯನ್ಸ್ ಹಾಕಿ ಟೂರ್ನಿಯಲ್ಲಿಯೂ ಅದೇ ಫಲಿತಾಂಶವನ್ನು ಪುನರಾವರ್ತಿಸಿದೆ. ತೀವ್ರ ಕುತೂಹಲ ಕೆರಳಿಸಿದ್ದ ಪಂದ್ಯ ಆರಂಭವಾದ ಮೊದಲ ನಿಮಿಷದಲ್ಲಿಯೇ ಉಪನಾಯಕ ಹರ್ಮನ್‌ಪ್ರೀತ್ ಸಿಂಗ್ ಮೂಲಕ ಭಾರತ ಗೋಲಿನ ಖಾತೆಯನ್ನು ತೆರೆದಿತ್ತು. ಮೊದಲಾರ್ಧದ 10ನೇ ನಿಮಿಷದಲ್ಲಿ ಪಾಕಿಸ್ತಾನ ಪರ ಗೋಲು ದಾಖಲಿಸಿದ ಅರ್ಫಾಜ್ ಪಂದ್ಯವನ್ನು ಸಮಬಲಕ್ಕೆ ತಂದು ನಿಲ್ಲಿಸಿದ್ದರು. 33ನೇ ನಿಮಿಷದಲ್ಲಿ ಪಾಕ್ ಪರ 2ನೇ ಗೋಲು ಸಿಡಿಸಿದ ಅಬ್ದುಲ್ ರಾಣಾ ಪಾಕ್’ಗೆ ಮುನ್ನಡೆ ತಂದುಕೊಟ್ಟರಾದರೂ 45 ನಿಮಿಷದಲ್ಲಿ ಭಾರತದ ಪರ ಸುಮಿತ್ ಗೋಲು ದಾಖಲಸಿದರು.

ಸಮಬಲದ ಹೋರಾಟ ಪ್ರದರ್ಶಿಸಿದ್ದ ಉಭಯ ತಂಡಗಳು ಅಂತಿಮ ಕ್ವಾರ್ಟರ್’ನಲ್ಲಿ ಜಿದ್ದಿಗೆ ಬಿದ್ದವರಂತೆ ಚೆಂಡಿನ ನಿಯಂತ್ರಣಕ್ಕಾಗಿ ಹೋರಾಡಿದರು. ಭಾರತದ ಪರ 53ನೇ ನಿಮಿಷದಲ್ಲಿ ವರುಣ್ ಕುಮಾರ್ ಹಾಗೂ 57ನೇ ನಿಮಿಷದಲ್ಲಿ ಆಕಾಶ್ ದೀಪ್ ಸಿಂಗ್ ಗೆಲುವಿನ ಗೋಲು ಗಳಿಸಿದರೆ, ಪಾಕಿಸ್ತಾನ ಪರ 57ನೇ ನಿಮಿಷದಲ್ಲಿ ಅಹ್ಮದ್ ನದೀಮ್ 3ನೇ ಗೋಲು ಗಳಿಸಿದರು.  

ಏಷ್ಯನ್ ಹಾಕಿ ಚಾಂಪಿಯನ್ಸ್ ಟ್ರೋಫಿಯ ರೌಂಡ್ ರಾಬಿನ್ ಸುತ್ತಿನಲ್ಲಿಯೂ ಪಾಕಿಸ್ತಾನವನ್ನು 3-1 ಅಂತರದಿಂದ ಭಾರತ ಮಣಿಸಿತ್ತು. ಕಳೆದ ಬಾರಿ ಮಸ್ಕತ್‌’ನಲ್ಲಿ ನಡೆದಿದ್ದ ಟೂರ್ನಿಯ ಫೈನಲ್‌ ಪಂದ್ಯವು ಮಳೆಯಿಂದಾಗಿ ರದ್ದಾದ ಕಾರಣ ಭಾರತ ಮತ್ತು ಪಾಕಿಸ್ತಾನ ತಂಡಗಳು ಪ್ರಶಸ್ತಿ ಹಂಚಿಕೊಂಡಿದ್ದವು. ಈ ಬಾರಿ ಭಾರತ ಅಜೇಯವಾಗಿ ಸೆಮಿಫೈನಲ್ ಹಂತಕ್ಕೆ ತಲುಪಿದ್ದರೂ, ಆ ಪಂದ್ಯದಲ್ಲಿ ಜಪಾನ್ ವಿರುದ್ಧ 3-5 ಅಂತರದಿಂದ ಅನಿರೀಕ್ಷಿತ ಸೋಲು ಕಂಡು ಫೈನಲ್ ಫೈಟ್’ನಿಂದ ಹೊರನಡೆದಿತ್ತು. ಆಶ್ಚರ್ಯವೆಂದರೆ ಲೀಗ್ ಹಂತದಲ್ಲಿ ಜಪಾನ್ ತಂಡವನ್ನು ಭಾರತ 6-0 ಅಂತರದಲ್ಲಿ ಏಕಪಕ್ಷೀಯವಾಗಿ ಸೋಲಿಸಿತ್ತು.

ಏಷ್ಯನ್ ಹಾಕಿ ಚಾಂಪಿಯನ್ಸ್ ಟ್ರೋಫಿಯ ಚಾಂಪಿಯನ್ ಪಟ್ಟಕ್ಕಾಗಿ ಜಪಾನ್ ಹಾಗೂ ದಕ್ಷಿಣ ಕೊರಿಯಾ ತಂಡಗಳು ಬುಧವಾರ ಮೈದಾನಕ್ಕಿಳಿಯಲಿವೆ.

Join Whatsapp
Exit mobile version