ನವದೆಹಲಿ: ಭಾರತೀಯ ವಿಮಾನಯಾನ ಸಂಸ್ಥೆಯು ಶುಕ್ರವಾರ ಅಂತಾರಾಷ್ಟ್ರೀಯ ಪ್ರಯಾಣಿಕರ ವಿಮಾನಗಳ ಮೇಲಿನ ನಿಷೇಧವನ್ನು ಆಗಸ್ಟ್ 31 ರ ಮಧ್ಯರಾತ್ರಿಯವರೆಗೆ ವಿಸ್ತರಿಸಿದೆ. ಅದೇ ರೀತಿಯಲ್ಲಿ ಸರಕು ವಿಮಾನಗಳಿಗೆ ಈ ನಿಷೇಧ ಅನ್ವಯಿಸುವುದಿಲ್ಲವೆಂದು ನಾಗರಿಕ ವಿಮಾನಯಾನ ಆಡಳಿತ ನಿರ್ದೇಶಕರು ತಿಳಿಸಿದ್ದಾರೆ.
ಭಾರತವು ಮಾರ್ಚ್ 23, 2021 ರಿಂದ ಒಳ ಮತ್ತು ಹೊರ ಹೋಗುವ ಎಲ್ಲಾ ನಿಗದಿತ ವಿಮಾನಗಳನ್ನು ಕೋವಿಡ್ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ನಿಷೇಧಿಸಿದೆ. ಅದೇ ರೀತಿಯಲ್ಲಿ ಪ್ರತಿ ತಿಂಗಳ ಕೊನೆಯಲ್ಲಿ ವಿಮಾನದ ಮೇಲಿನ ನಿಷೇಧವನ್ನು ವಿಸ್ತರಿಸಲಾಗುತ್ತಿದೆಯೆಂದು ವಿಮಾನಯಾನ ನಿರ್ದೇಶಕರು ಸ್ಪಷ್ಟಪಡಿಸಿದ್ದಾರೆ. ನಾಗರಿಕ ವಿಮಾನಯಾನ ಸಚಿವಾಲಯವು 28 ದೇಶಗಳೊಂದಿಗೆ ದ್ವಿಪಕ್ಷೀಯ ವಾಯುಯಾನ ಒಪ್ಪಂದಗಳಿಗೆ ಸಹಿ ಹಾಕಿದೆ ಎಂದು ಅವರು ತಿಳಿಸಿದ್ದಾರೆ.
ಅಂತಾರಾಷ್ಟ್ರೀಯ ಕನ್ಸಲ್ಟೆಂಟ್ ಪ್ರಕಾರ ವಾಯುಯಾನ ಒಪ್ಪಂದಗಳ ಅಡಿಯಲ್ಲಿ ಅಂತರರಾಷ್ಟ್ರೀಯ ವಾಯು ಸಂಚಾರವು ಕೋವಿಡ್ ಪೂರ್ವದ ಸುಮಾರು ಶೇಕಡಾ 50ರಷ್ಟು ಚೇತರಿಸಿಕೊಂಡಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ವಾಯುಯಾನ ಮಾರುಕಟ್ಟೆಯು 16 ಮಿಲಿಯನ್ ಅಂತರಾಷ್ಟ್ರೀಯ ವಿಮಾನ ಪ್ರಯಾಣಿಕರನ್ನು (ಹಿಂದಿನ ಹಣಕಾಸು ವರ್ಷದಲ್ಲಿ 10 ಮಿಲಿಯನ್) ಮತ್ತು 80 ಮಿಲಿಯನ್ ದೇಶೀಯ ಪ್ರಯಾಣಿಕರನ್ನು ಆವರಿಸಿಕೊಳ್ಳುತ್ತದೆ ಎಂದು ಅಂದಾಜಿಸಿದೆ. ಅದಾಗ್ಯೂ ಭಾರತದಲ್ಲಿ 67 ಮಿಲಿಯನ್ ಅಂತಾರಾಷ್ಟ್ರೀಯ ಪ್ರಯಾಣಿಕರನ್ನು ಮತ್ತು 138 ಮಿಲಿಯನ್ ದೇಶೀಯ ಪ್ರಯಾಣಿಕರನ್ನು ಕೋವಿಡ್ ಪೂರ್ವದಲ್ಲಿ ನಿರ್ವಹಣೆ ಮಾಡಿರುವ ಕುರಿತು ವರದಿಯಾಗಿತ್ತು.
ಅಂತರಾಷ್ಟ್ರೀಯ ವಾಯುಸಾರಿಗೆ ಸಂಸ್ಥೆ (ಐಎಟಿಎ) ಈ ಹಿಂದೆ ನಿಗದಿಯಾಗಿದ್ದ ಅಂತರಾಷ್ಟ್ರೀಯ ವಿಮಾನಯಾನಗಳನ್ನು ಪ್ರಾರಂಭಿಸಲಿ ಎಂದು ಐಎಟಿಎ ಮಹಾ ನಿರ್ದೇಶಕ ವಿಲ್ಲಿ ವಾಲ್ಸ್ ಅವರು ಭಾರತ ವಿಮಾನಯಾನ ಸಂಸ್ಥೆಯನ್ನು ಒತ್ತಾಯಿಸಿದ್ದಾರೆ. ಈ ಮದ್ಯೆ ಭಾರತೀಯ ವಿಮಾನಯಾನ ಸಂಸ್ಥೆಯ ನಿರ್ದೇಶಕರು ಆಗಸ್ಟ್ 31 ರ ವರೆಗೆ ವಿಮಾನಯಾನ ನಿಷೇಧ ಮುಂದುವರಿಯಲಿದೆಯೆಂದು ಅಧಿಕೃತವಾಗಿ ತಿಳಿಸಿದೆ.