ನವದೆಹಲಿ: ದೇಶದ ಭದ್ರತೆಗೆ ಅಪಾಯ ತಂದೊಡ್ಡುವ ಸಾಧ್ಯತೆಯ ಕಾರಣ ನೀಡಿ 54 ಆ್ಯಪ್ ಗಳ ಮೇಲೆ ಭಾರತ ನಿಷೇಧ ಹೇರಿದೆ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ತಿಳಿಸಿದೆ.
ಈ 54 ಅಪ್ಲಿಕೇಶನ್ ಗಳು ಬಳಕೆದಾರರ ಡೇಟಾವನ್ನು ಅನುಮತಿರಹಿತವಾಗಿ ಸಂಗ್ರಹಿಸುತ್ತವೆ. ಸಂಗ್ರಹವಾದ ಡೇಟಾವನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಮತ್ತು ಅನಾಮದೇಯ ರಾಷ್ಟ್ರದಲ್ಲಿರುವ ಸರ್ವರ್ ಗಳಿಗೆ ರವಾನಿಸಲಾಗುತ್ತಿದೆ ಎಂದು ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಸದ್ಯ ನಿಷೇಧಿತ ಅಪ್ಲಿಕೇಶನ್ ಗಳ ಪಟ್ಟಿಯಲ್ಲಿ ಸ್ವೀಟ್ ಸೆಲ್ಫಿ ಎಚ್.ಡಿ, ಬ್ಯೂಟಿ ಕ್ಯಾಮೆರಾ – ಸೆಲ್ಫಿ ಕ್ಯಾಮೆರಾ, ಗರೆನಾ ಫ್ರೀ ಫೈರ್ – ಇಲ್ಯುಮಿನೇಟ್, ವಿವಾ ವೀಡಿಯೋ ಎಡಿಟರ್, ಟೆನ್ಸೆಂಟ್ ಎಕ್ಸ್ ರಿವರ್, ಒನ್ ಮಿಯೋಜಿ ಅರೆನಾ, ಆ್ಯಪ್ ಲಾಕ್ ಮತ್ತು ಡ್ಯುಯಲ್ ಸ್ಪೇಸ್ ಲೈಟ್ ಒಳಗೊಂಡಿದೆ.
ಕಳೆದ ವರ್ಷದ ಜೂನ್ ನಲ್ಲಿ ರಾಷ್ಟ್ರದ ಸಾರ್ವಭೌಮತ್ವ ಮತ್ತು ಭದ್ರತೆಯ ನೆಪದಲ್ಲಿ ಭಾರತ ಟಿಕ್ ಟಾಕ್, ವೀಚಾಟ್ ಮತ್ತು ಹೆಲೋ ಅಂತಹ ವ್ಯಾಪಕವಾಗಿ ಬಳಸುವ ಸಾಮಾಜಿಕ ಮಾಧ್ಯಮಗಳು ಸೇರಿದಂತೆ 59 ಚೀನಿ ಆ್ಯಪ್ ಗಳನ್ನು ನಿಷೇಧಿಸಲಾಗಿತ್ತು. ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 69 ಎ ಅಡಿಯಲ್ಲಿ ಅಪ್ಲಿಕೇಶನ್ಗಳನ್ನು ನಿಷೇಧಿಸಲಾಗಿದೆ ಎಂದು ಎಲೆಕ್ಟ್ರಾನಿಕ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ತಿಳಿಸಿದೆ.
ಮೇ 2020 ರಲ್ಲಿ ಚೀನಾದೊಂದಿಗಿನ ಗಡಿ ಉದ್ವಿಗ್ನತೆಯ ನಂತರ ಭಾರತವು 321 ಅಪ್ಲಿಕೇಶನ್ಗಳನ್ನು ನಿರ್ಬಂಧಿಸಿತ್ತು.