ಬರ್ಮಿಂಗ್‌ಹ್ಯಾಮ್: ತೀವ್ರ ಕುತೂಹಲ ಕೆರಳಿಸಿರುವ ಭಾರತ-ಇಂಗ್ಲೆಂಡ್ ತಂಡಗಳ ನಡುವಿನ ಟೆಸ್ಟ್ ಪಂದ್ಯ ಜುಲೈ 1, ಶುಕ್ರವಾರದಿಂದ ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್ ಮೈದಾನದಲ್ಲಿ ಆರಂಭವಾಗಲಿದೆ. ನಿರ್ಣಾಯಕ ಟೆಸ್ಟ್ ಪಂದ್ಯಕ್ಕೆ ಇಂಗ್ಲೆಂಡ್, ತನ್ನ ಬಲಿಷ್ಠ ಆಡುವ ಹನ್ನೊಂದರ ಬಳಗವನ್ನು ಪ್ರಕಟಿಸಿದೆ. ಬೆನ್ ಸ್ಟೋಕ್ಸ್ ನಾಯಕನಾಗಿರುವ ತಂಡದಲ್ಲಿ ಕೇವಲ ಓರ್ವ ಸ್ಪಿನ್ನರ್‌ಗೆ ಸ್ಥಾನ ನೀಡಲಾಗಿದೆ. ನ್ಯೂಜಿಲೆಂಡ್ ವಿರುದ್ಧದ ಮೂರನೇ ಟೆಸ್ಟ್‌ನಿಂದ ಹೊರಗುಳಿದಿದ್ದ ಪ್ರಮುಖ ವೇಗಿ ಜೇಮ್ಸ್ ಆಂಡರ್ಸನ್ ತಂಡಕ್ಕೆ ಮರಳಿದ್ದಾರೆ. ಹೀಗಾಗಿ ವೇಗಿ ಜೆಮಿ ಓವರ್‌ಟನ್ ತಂಡದಿಂದ ಹೊರಗುಳಿಯಲಿದ್ದಾರೆ. ಕೋವಿಡ್‌ನಿಂದ ಚೇತರಿಸಿಕೊಳ್ಳುತ್ತಿರುವ ಬೆನ್ ಫೋಕ್ಸ್ ಬದಲಿಗೆ ಸ್ಯಾಮ್ ಬಿಲ್ಲಿಂಗ್ಸ್ ವಿಕೆಟ್ ಕೀಪಿಂಗ್ ಜವಾಬ್ಧಾರಿ ನಿರ್ವಹಿಸಲಿದ್ದಾರೆ.
ಇಂಗ್ಲೆಂಡ್ ಆಡುವ ಹನ್ನೊಂದರ ಬಳಗ ಹೀಗಿದೆ.
ಅಲೆಕ್ಸ್ ಲೀಸ್, ಝಾಕ್ ಕ್ರಾಲಿ, ಓಲಿ ಪೋಪ್, ಜೋ ರೂಟ್, ಬೆನ್ ಸ್ಟೋಕ್ಸ್ (ನಾಯಕ), ಜಾನಿ ಬೈರ್‌ಸ್ಟೋ, ಸ್ಯಾಮ್ ಬಿಲ್ಲಿಂಗ್ಸ್ (ವಿಕೆಟ್ ಕೀಪರ್), ಜ್ಯಾಕ್ ಲೀಚ್, ಮ್ಯಾಟಿ ಪಾಟ್ಸ್, ಸ್ಟುವರ್ಟ್ ಬ್ರಾಡ್, ಜೇಮ್ಸ್ ಆಂಡರ್ಸನ್
ಕಳೆದ ವರ್ಷ 5 ಪಂದ್ಯಗಳ ಟೆಸ್ಟ್ ಸರಣಿ ಆಡಲು ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದ ಭಾರತ, ಕೋವಿಡ್ ಕಾರಣದಿಂದಾಗಿ ಟೂರ್ನಿಯನ್ನು ಅರ್ಧದಲ್ಲೇ ಮೊಟಕುಗೊಳಿಸಿ ತಾಯ್ನಾಡಿಗೆ ಮರಳಿತ್ತು. ಈ ವೇಳೆ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿತ್ತು. ಉಳಿದಿರುವ ಒಂದು ಪಂದ್ಯ ಜುಲೈ 1ರಿಂದ ಎಡ್ಜ್‌ಬಾಸ್ಟನ್ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ. ಟೆಸ್ಟ್ ಪಂದ್ಯದ ಬಳಿಕ ಮೂರು ಪಂದ್ಯಗಳ ಟಿ-20 ಸರಣಿ ಮತ್ತು ಜುಲೈ 12ರಿಂದ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದೆ.