Home ಕರಾವಳಿ ಪಿಯುಸಿ ಪ್ರವೇಶಾತಿಗೆ ಬೇಡಿಕೆ ಹೆಚ್ಚಿದ ಹಿನ್ನೆಲೆ; ಕರಾವಳಿಯಾದ್ಯಂತ ಹೊಸ 18 ಪಿ ಯು ಕಾಲೇಜುಗಳು...

ಪಿಯುಸಿ ಪ್ರವೇಶಾತಿಗೆ ಬೇಡಿಕೆ ಹೆಚ್ಚಿದ ಹಿನ್ನೆಲೆ; ಕರಾವಳಿಯಾದ್ಯಂತ ಹೊಸ 18 ಪಿ ಯು ಕಾಲೇಜುಗಳು !

ಮಂಗಳೂರು: ಈ ಬಾರಿ ಎಸೆಸೆಲ್ಸಿಯಲ್ಲಿ ಉತ್ತಮ ಫಲಿತಾಂಶ ದಾಖಲಾದ ಹಿನ್ನೆಲೆಯಲ್ಲಿ ಪ್ರಥಮ ಪಿಯುಸಿ ಪ್ರವೇಶಾತಿಗೆ ಬೇಡಿಕೆ ಹೆಚ್ಚಾಗಿದ್ದು,  ಈ ಹಿನ್ನೆಲೆಯಲ್ಲಿ ಹೊಸ ಪಿಯು ಕಾಲೇಜು ಆರಂಭಕ್ಕೆ ಖಾಸಗಿ ಶಿಕ್ಷಣ ಸಂಸ್ಥೆಗಳು ಮುಂದಾಗಿವೆ.

ದಕ್ಷಿಣ ಕನ್ನಡ ಮ ತ್ತು ಉಡುಪಿ  ಜಿಲ್ಲೆಯಲ್ಲಿ 18 ಹೊಸ ಅನುದಾನ ರಹಿತ ಪದವಿಪೂರ್ವ ಕಾಲೇಜುಗಳ ಆರಂಭಕ್ಕೆ ಶಿಕ್ಷಣ ಸಂಸ್ಥೆಗಳು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿವೆ.

ಸರಕಾರ ಒಪ್ಪಿಗೆ ನೀಡಿದರೆ, ಒಟ್ಟು 14 ಪಿಯು ಕಾಲೇಜುಗಳು 2022-23ರ ಶೈಕ್ಷಣಿಕ ವರ್ಷದಲ್ಲಿ ಚಟುವಟಿಕೆ ಆರಂಭಿಸುವ ನಿರೀಕ್ಷೆಯಿದೆ.

ದ.ಕ. ಜಿಲ್ಲೆಯ ಅಡ್ಡೂರು, ಸೂರಿಂಜೆ, ಬಜಪೆ, ಕಿನ್ನಿಗೋಳಿ, ಪುತ್ತೂರು ಸಹಿತ 14 ಹಾಗೂ  ಉಡುಪಿಯ ಕಾಪು, ಕಟಪಾಡಿ, ವಕ್ವಾಡಿ ಸೇರಿ 4 ಒಟ್ಟು 18 ಕಡೆಗಳಲ್ಲಿ ಹೊಸ  ಪ್ರಸ್ತಾವನೆ ಸಲ್ಲಿಕೆಯಾಗಿದೆ. ದ.ಕ. ಜಿಲ್ಲೆಯಲ್ಲಿ ಸದ್ಯ 197 ಹಾಗೂ ಉಡುಪಿಯಲ್ಲಿ 105 ಪದವಿಪೂರ್ವ ಕಾಲೇಜುಗಳಿದ್ದು, ಇದರಲ್ಲಿ ದ.ಕ. 99 ಹಾಗೂ ಉಡುಪಿಯಲ್ಲಿ 45 ಅನುದಾನರಹಿತ ಕಾಲೇಜುಗಳಿವೆ. ಉಡುಪಿಯಲ್ಲಿ ಕಳೆದ ವರ್ಷ 2 ಹೊಸ ಪದವಿ ಕಾಲೇಜಿಗೆ ಅನುಮತಿ ಸಿಕ್ಕಿದ್ದು, ದ.ಕ. ಜಿಲ್ಲೆಯಲ್ಲಿ ಕಳೆದ ಬಾರಿ ಯಾವುದೇ ಹೊಸ ಕಾಲೇಜು ಆರಂಭವಾಗಿರಲಿಲ್ಲ.

2022-23ನೇ ಶೈಕ್ಷಣಿಕ ಸಾಲಿನಲ್ಲಿ ಹೊಸ ಖಾಸಗಿ ಶಾಶ್ವತ ಅನುದಾನ ರಹಿತ ಪದವಿಪೂರ್ವ ಕಾಲೇಜುಗಳನ್ನು ಪ್ರಾರಂಭಿಸಲು ಇಚ್ಚಿಸುವ ಅರ್ಹ ಖಾಸಗಿ ಶಿಕ್ಷಣ ಸಂಸ್ಥೆಗಳಿಂದ ಆನ್‌ಲೈನ್‌ ಮೂಲಕ ಅರ್ಜಿಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ಅರ್ಜಿ ಸಲ್ಲಿಸುವವರು ಅಧಿಕೃತವಾಗಿ ಸಂಬಂಧಪಟ್ಟ ಪ್ರಾಧಿಕಾರದಲ್ಲಿ ನೋಂದಣಿಯಾಗಿರಬೇಕು. ಸಂಸ್ಥೆಯ  ಕುರಿತು ನ್ಯಾಯಾಲಯದಲ್ಲಿ ಪ್ರಕರಣ ಇರಬಾರದು. ಆಡಳಿತ ಮಂಡಳಿಯ ಕಾರ್ಯಕಾರಿ ಸಮಿತಿ ಸದಸ್ಯರು ಇರಬೇಕು ಎಂಬಿತ್ಯಾದಿ ನಿಯಮಗಳಿವೆ.

Join Whatsapp
Exit mobile version