ನವದೆಹಲಿ: ಜೈಲು ಸೇರಿರುವ ದೆಹಲಿಯ ಸಚಿವ ಎಎಪಿಯ ಸತ್ಯೇಂದರ್ ಜೈನ್ ಅವರು ಜೈಲಿನಲ್ಲಿ ಆರಾಮವಾಗಿ ಮಸಾಜ್ ಮಾಡಿಸಿಕೊಳ್ಳುತ್ತಿರುವ ವೀಡಿಯೋ ಇತ್ತೀಚೆಗೆ ಭಾರೀ ಚರ್ಚೆಗೊಳಗಾಗಿದೆ. ಮಸಾಜ್ ಮಾಡುತ್ತಿದ್ದವನು ರಿಂಕು ಎನ್ನುವ ಕೈದಿ. ಆತನು ಫಿಸಿಯೋತೆರಪಿಸ್ಟ್ ಅಲ್ಲ, ಅತ್ಯಾಚಾರದಡಿ ಭಾರತೀಯ ದಂಡ ಸಂಹಿತೆಯ ಪೋಕ್ಸೋ ಕಾಯ್ದೆಯ 6ರಡಿಯ 376, 506, 509 ವಿಧಿಗಳಡಿ ಜೈಲಿನಲ್ಲಿ ಇರುವವನು ಎಂಬುದು ದೃಢಪಟ್ಟಿದೆ.
ನವೆಂಬರ್ 17ರಂದು ರಿಂಕು ಜೈಲಿನೊಳಗಿರುವ ಮಂತ್ರಿಗೆ ಮಸಾಜ್ ಮಾಡುತ್ತಿರುವ ವೀಡಿಯೋ ಹೊರಬಿದ್ದಿದೆ. ಬಿಜೆಪಿಯ ವಕ್ತಾರ ಶೆಹಜಾದ್ ಪೂನಾವಾಲಾ ಎನ್ನುವವರು ಆ ವೀಡಿಯೋವನ್ನು ಪೋಸ್ಟ್ ಮಾಡಿದ್ದಾರೆ.
ಸೆರೆಯಾಳು ರಿಂಕು ಜೈಲು ಸೇರಿರುವ ಎಎಪಿ ಮಂತ್ರಿಗೆ ಮಸಾಜ್ ಮಾಡುವುದು ವೀಡಿಯೋದಲ್ಲಿ ಕಂಡು ಬಂದಿದೆ. ಅಲ್ಲದೆ ಹತ್ತಿರದಲ್ಲೇ ಬಾಟಲ್ಡ್ ಕುಡಿಯುವ ನೀರು ಇದೆ. ಇವೆಲ್ಲ ಸೆರೆಮನೆ ನಿಯಮಗಳಿಗೆ ವಿರುದ್ಧವಾದವುಗಳಾಗಿವೆ.
ಸತ್ಯೇಂದ್ರ ಜೈನ್ ರನ್ನು ಅಕ್ರಮ ಹಣ ವರ್ಗಾವಣೆಯ ಪಿಎಂಎಲ್ ಎ ಕಾಯ್ದೆಯಡಿ ಮೇ 30ರಂದು ಬಂಧಿಸಲಾಗಿದೆ. ಅವರ ಜಾಮೀನು ಅರ್ಜಿಯು ಈಗಾಗಲೇ ಹಲವು ಬಾರಿ ತಿರಸ್ಕಾರಗೊಂಡಿದೆ.