ಜಮ್ಮು: ಪವಿತ್ರ ರಂಝಾನ್ ತಿಂಗಳಲ್ಲಿ ದೇಶದ ಮುಸ್ಲಿಮರ ಮೇಲೆ ಬಿಜೆಪಿ ಮತ್ತು ಸಂಘಪರಿವಾರದ ಕಾರ್ಯಕರ್ತರು ಅಮಾನುಷ ದಾಳಿ ಮಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಕಿಡಿಕಾರಿದ್ದಾರೆ.
ಕಾಶ್ಮೀರದ ಜನತೆಗೆ ತನ್ನ ಈದ್ ಸಂದೇಶ ಮತ್ತು ಶುಭಾಶಯ ಸಲ್ಲಿಸಿದ ಬಳಿಕ ಅವರು ಈ ಮೇಲಿನಂತೆ ಪ್ರತಿಕ್ರಿಯಿಸಿದ್ದಾರೆ.
ದೇಶಾದ್ಯಂತ ಬಿಜೆಪಿ ಸರ್ಕಾರ ಮತ್ತು ಸಂಘಪರಿವಾರ ಮುಸ್ಲಿಮ್ ಸಮುದಾಯವನ್ನು ಗುರಿಯಾಗಿಸಿ ಆಕ್ರಮಣವನ್ನು ಮಾಡುತ್ತಿರುವಾಗ ಈ ವರ್ಷ ಮುಸ್ಲಿಮರು ಪವಿತ್ರ ರಂಝಾನ್ ತಿಂಗಳಲ್ಲಿ ನಿಜವಾಗಿಯೂ ಸ್ಥೈರ್ಯ ಮತ್ತು ಧೈರ್ಯದಿಂದ ಜೀವಿಸಿ ತೋರಿಸಿದ್ದಾರೆ ಎಂದು ಮುಫ್ತಿ ತಿಳಿಸಿದ್ದಾರೆ.
ಬುಲ್ಡೋಝರ್ ಕಾರ್ಯಾಚರಣೆ ರಾಜ್ಯ ಸರ್ಕಾರದ ಭಯೋತ್ಪಾದನೆಯ ಸಂಕೇತವಾಗಿದೆ, ಸರ್ಕಾರ ಬಿಚ್ಚಿಟ್ಟ ದ್ವೇಷದ ಪ್ರವೃತ್ತಿ ಮತ್ತು ಹಿಂದೂ ರಾಷ್ಟ್ರದ ಮಾರ್ಗಸೂಚಿ ಬಿಜೆಪಿಯ ಆಯ್ಕೆಯ ಪ್ರತಿ ರೂಪವೂ ವಿನಾಶಕಾರಿಯಾಗುತ್ತಿರುವಂತೆ ತೋರುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಮಧ್ಯೆ ಬಂಧಿತ ಪತ್ರಕರ್ತರು, ವಿದ್ಯಾರ್ಥಿಗಳು, ಮಾನವ ಹಕ್ಕುಗಳು ಮತ್ತು ರಾಜಕೀಯ ಕಾರ್ಯಕರ್ತರಿಗೆ ಮುಫ್ತಿ ಅವರು ತಮ್ಮ ಬೆಂಬಲ ಸೂಚಿಸಿದ್ದಾರೆ.