ದಾವಣಗೆರೆಯಲ್ಲಿ ಗಂಡಸರು ಯಾರು ಇಲ್ಲ ಎಂದು ಬಿಂಬಿಸಿದ್ದಾರೆ: ರೇಣುಕಾಚಾರ್ಯ

Prasthutha|

ದಾವಣಗೆರೆ: ಬುಧವಾರ ಬಿಡುಗಡೆಯಾದ ಬಿಜೆಪಿ ಎರಡನೇ ಪಟ್ಟಿಯಲ್ಲಿ ದಾವಣಗೆರೆ ಕ್ಷೇತ್ರದ ಹಾಲಿ ಸಂಸದ ಜಿ.ಎಂ. ಸಿದ್ಧೇಶ್ವರ ಬದಲಿಗೆ ಅವರ ಪತ್ನಿ ಗಾಯತ್ರಿ ಅವರಿಗೆ ಈ ಬಾರಿ ಬಿಜೆಪಿ ಟಿಕೆಟ್ ನೀಡಿದ್ದಕ್ಕೆ ಮಾಜಿ ಸಚಿವ ರೇಣುಕಾಚಾರ್ಯ, ರಾಜ್ಯ ಹಾಗೂ ರಾಷ್ಟ್ರೀಯ ನಾಯಕರ ವಿರುದ್ಧ ಬಹಿರಂಗ ವಾಗ್ದಾಳಿ ಮುಂದುವರೆಸಿದ್ದಾರೆ.

- Advertisement -

ನಾವು ಹೊಸ ಮುಖಗಳಿಗೆ ಮಣೆ ಹಾಕಿ ಕುಟುಂಬ ರಾಜಕಾರಣಕ್ಕೆ ಅಂತ್ಯ ಹಾಡಿ ಎಂದು ಹೈಕಮಾಂಡ್​ ಬಳಿ ಮನವಿ ಮಾಡಿದ್ದೆವು. ನಮ್ಮ ಹೋರಾಟ ಕಾಂಗ್ರೆಸ್​ ವಿರುದ್ಧವೇ ಹೊರತು ವ್ಯಕ್ತಿಯ ವಿರುದ್ಧ ಅಲ್ಲ. ದಾವಣಗೆರೆ ಜಿಲ್ಲೆ ಬಿಜೆಪಿಯಲ್ಲಿ ಯಾರು ಗಂಡಸರು ಇಲ್ಲ ಎಂಬ ರೀತಿಯಲ್ಲಿ ಬಿಂಬಿಸಲಾಗಿದೆ ಎಂದು ಹೇಳಿದ್ದಾರೆ.

ಪಕ್ಷದ ವರಿಷ್ಠರು ಹಾಲಿ ಸಂಸದ ಜಿಎಂ ಸಿದ್ದೇಶ್ವರ ಪತ್ನಿ ಗಾಯತ್ರಿ ಸಿದ್ದೇಶ್ವರ ಅವರಿಗೆ ನೀಡಿರುವ ಟಿಕೆಟ್ ರದ್ದು ಮಾಡಿ ತನಗೆ ನೀಡಬೇಕು ಎಂದೂ‌ ರೇಣುಕಾಚಾರ್ಯ ಹೇಳಿದ್ದಾರೆ.

- Advertisement -

ನಾಲ್ಕೈದು ಮಂದಿ ಆಕಾಂಕ್ಷಿಗಳಿದ್ದೇವೆ, ಯಾರಿಗೂ ನೀಡಿಲ್ಲ. ಮಾಜಿ ಸಿಎಂ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ದೆಹಲಿ ಪ್ರಮುಖ ನಾಯಕರು ಸೇರಿದಂತೆ ಎಲ್ಲರನ್ನೂ ಭೇಟಿ ಮಾಡಿ ಮನವಿ ಮಾಡಿದ್ದರೂ, ಸಿದ್ದೇಶ್ವರರ ಕುಟುಂಬಕ್ಕೆ ಟಿಕೆಟ್ ನೀಡಲಾಗಿದೆ ಎಂದು ರೇಣುಕಾಚಾರ್ಯ ಅಸಹನೆ ಹೊರ ಹಾಕಿದ್ದಾರೆ

ದಾವಣಗೆರೆ ಜಿಲ್ಲೆಯಲ್ಲಿ ಸಿದ್ದೇಶ್ವರ ಅವರು ಸಂಘಟನೆ ನೀಡಿರುವ ಕೊಡುಗೆ ಶೂನ್ಯ, ಅಭಿವೃದ್ಧಿಯೂ ಶೂನ್ಯ. ಎಲ್ಲವನ್ನೂ ಸ್ವಂತಕ್ಕೋಸ್ಕರ ಮಾಡಿಕೊಂಡಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಸೋಲಿಗೆ ಅವರೇ ಕಾರಣ. ಯಾವ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಲಿಲ್ಲ. ಎಲ್ಲಿಯೂ ಬಿರುಸಿನ ಪ್ರಚಾರ ಮಾಡಿಲ್ಲ. ಕೇವಲ ನಾಲ್ಕರಿಂದ ಐದು ತಾಸು ಅಷ್ಟೇ ಪ್ರಚಾರ ನಡೆಸಿದ್ದಾರೆ. ನಾವೆಲ್ಲರೂ ಸೋಲಲು ಸಿದ್ದೇಶ್ವರ ಅವರೇ ಕಾರಣ. ಅವರಿಗೆ ಟಿಕೆಟ್ ಕೊಡಬೇಡಿ ಎಂದರೆ ಅವರ ಮಡದಿಗೆ ಕೊಟ್ಟಿದ್ದಾರೆ ಎಂದು ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.



Join Whatsapp