Home ಟಾಪ್ ಸುದ್ದಿಗಳು ನೂರು ದಿನದಲ್ಲಿ ಸರ್ಕಾರ ಎಡವಿದ್ದೇ ಹೆಚ್ಚು, ಮೂಲೆ ಮೂಲೆಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ: ಬೊಮ್ಮಾಯಿ

ನೂರು ದಿನದಲ್ಲಿ ಸರ್ಕಾರ ಎಡವಿದ್ದೇ ಹೆಚ್ಚು, ಮೂಲೆ ಮೂಲೆಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ: ಬೊಮ್ಮಾಯಿ

ಬೆಂಗಳೂರು: ಕಾಂಗ್ರೆಸ್ ಸರ್ಕಾರ ನೂರು ದಿನಗಳಲ್ಲಿ ಎಡವಿದ್ದೇ ಹೆಚ್ಚು. ಗ್ಯಾರೆಂಟಿ ನೆಪದಲ್ಲಿ ಒಂದು ವರ್ಷದ ಅಭಿವೃದ್ಧಿಯ ಎಲ್ಲ ಕಾಮಗಾರಿಗಳು ಸಂಪೂರ್ಣ ನಿಂತು ಹೋಗಿದೆ. ಕಾಂಗ್ರೆಸ್ ಸರ್ಕಾರ ವರ್ಗಾವಣೆಯನ್ನು ಒಂದು ಕಮಿಷನ್ ದಂಧೆಯಾಗಿ ಮಾಡಿ, ವಿಧಾನಸೌಧದ ಮೂಲೆ ಮೂಲೆಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಗುತ್ತಿಗೆದಾರರ ಬಿಲ್ ಬಾಕಿ ಇಟ್ಟುಕೊಂಡು ಕಮಿಷನ್ ದಂಧೆಗೆ ಮುಂದಾಗಿದೆ ಎಂದು ಬೊಮ್ಮಾಯಿ ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ಮಾಡಿದರು.

ರಾಜ್ಯದಲ್ಲಿ ಕಾಂಗ್ರೆಸ್​ ಸರ್ಕಾರ ಸೆಂಚೂರಿ ಬಾರಿಸಿದ್ದು, ಈ ಸರ್ಕಾರದ 100 ದಿನಗಳ ಸಾಧನೆ ಬಗ್ಗೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಟ್ವೀಟ್​​ ಮಾಡಿ ರೈತರು ಬರಗಾಲದ ಬವಣೆಯಲ್ಲಿ ಸಿಕ್ಕರೂ ಕೂಡ ಸರ್ಕಾರ ಆ ಕಡೆ ತಿರುಗಿ ನೋಡಿಲ್ಲ. ರೈತರ ಆತ್ಮಹತ್ಯೆ ಮತ್ತೆ ಪ್ರಾರಂಭವಾಗಿದೆ. ಕೃಷಿ ಉತ್ಪಾದನೆಗೆ ಪೆಟ್ಟು ಬೀಳುವ ಎಲ್ಲ ಲಕ್ಷಣ ಕಾಣುತ್ತಿದೆ. ಪೂರ್ಣ ಪ್ರಮಾಣದ ಗ್ಯಾರೆಂಟಿ ಅನುಷ್ಠಾನ ಗೊಳಿಸಲು ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಹರಿಹಾಯ್ದಿದ್ದಾರೆ.

ಒಂದು ಕಡೆ ವಿದ್ಯುತ್ ದರ ಹೆಚ್ಚಿಸಿ ಗ್ರಾಹಕರಿಗೆ ಶಾಕ್ ಕೊಟ್ಟಿದೆ. ಸಾರಿಗೆ ಸಿಬ್ಬಂದಿಗೆ ಸಮರ್ಪಕವಾದ ಸಂಬಳ ನೀಡಿಲ್ಲ. 10 ಕೆಜಿ ಅಕ್ಕಿ ಗ್ಯಾರೆಂಟಿಯನ್ನು ಈಡೇರಿಸಲಾಗಿಲ್ಲ. ಕೇಂದ್ರದ ಐದು ಕೆಜಿ ಅಕ್ಕಿಯೇ ಜನರ ಸಹಾಯಕ್ಕೆ ಬಂದಿದೆ. ರಾಜ್ಯದಲ್ಲಿ ಗೃಹಲಕ್ಷ್ಮೀಯರ ಹುಡುಕಾಟ ಪೂರ್ಣಗೊಂಡಿಲ್ಲ. ಈ ಮಧ್ಯ ಗ್ಯಾರೆಂಟಿಗಾಗಿ ಎಸ್ಸಿ ಎಸ್ಟಿ ಅಭಿವೃದ್ಧಿ ಹಣ 11 ಸಾವಿರ ಕೋಟಿ ರೂಪಾಯಿ ಬಳಕೆ ಮಾಡಿ ಎಸ್ಸಿ, ಎಸ್ಟಿ ಮತ್ತು ಒಬಿಸಿ ಜನರಿಗೆ ಸರ್ಕಾರ ಮೋಸ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Join Whatsapp
Exit mobile version