Home ಟಾಪ್ ಸುದ್ದಿಗಳು ದುಷ್ಕರ್ಮಿಗಳಿಂದ ಧ್ವಂಸಗೊಂಡ ಹಿಂದೂ ದೇವಾಲಯವನ್ನು ಸರ್ಕಾರದ ಖರ್ಚಿನಲ್ಲೇ ಪುನರ್ನಿರ್ಮಾಣ ಮಾಡುತ್ತೇವೆ : ಪಾಕ್ ಪ್ರಧಾನಿ ಇಮ್ರಾನ್...

ದುಷ್ಕರ್ಮಿಗಳಿಂದ ಧ್ವಂಸಗೊಂಡ ಹಿಂದೂ ದೇವಾಲಯವನ್ನು ಸರ್ಕಾರದ ಖರ್ಚಿನಲ್ಲೇ ಪುನರ್ನಿರ್ಮಾಣ ಮಾಡುತ್ತೇವೆ : ಪಾಕ್ ಪ್ರಧಾನಿ ಇಮ್ರಾನ್ ಖಾನ್

ಪೊಲೀಸ್ ನಿರ್ಲಕ್ಷ್ಯದ ಕುರಿತು ಛೀಮಾರಿ ಹಾಕಿದ ಪಾಕ್ ಸುಪ್ರೀಮ್ ಕೋರ್ಟ್

ಲಾಹೋರ್ : ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ದುಷ್ಕರ್ಮಿಗಳ ಗುಂಪೊಂದು ಹಿಂದೂ ದೇವಾಲಯದ ಮೇಲೆ ನಡೆದ ದಾಳಿಯನ್ನು ಪ್ರಧಾನಮಂತ್ರಿ ಇಮ್ರಾನ್ ಖಾನ್ ಅವರು ಖಂಡಿಸಿದ್ದಾರೆ. ಅದೇ ರೀತಿ ದುಷ್ಕೃತ್ಯದಲ್ಲಿ ಭಾಗಿಯಾದ ಎಲ್ಲಾ ಅಪರಾಧಿಗಳನ್ನು ಬಂಧಿಸಲಾಗುವುದು ಮತ್ತು ಪೊಲೀಸರ ನಿರ್ಲಕ್ಷ್ಯದ ವಿರುದ್ಧ ಕ್ರಮ ಕೈಗೊಳ್ಳಲಾಗುವುದೆಂದು ಅವರು ಈ ಸಂದರ್ಭದಲ್ಲಿ ತಿಳಿಸಿದ್ದಾರೆ.

ನಿನ್ನೆ ಭೋಂಗ್ ಎಂಬಲ್ಲಿನ ಗಣೇಶ ಮಂದಿರದ ಮೇಲೆ ದಾಳಿ ನಡೆದಿತ್ತು. ಘಟನೆಯ ಕುರಿತಂತೆ ಗುರುವಾರ ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ಪ್ರಧಾನಿ ಇಮ್ರಾನ್ ಖಾನ್ ಅವರು, ಈ ಸಂಬಂಧ ಪಂಜಾಬ್ ನ ಪೊಲೀಸ್ ಐಜಿ ಅವರೊಂದಿಗೆ ಮಾತನಾಡಿ ಎಲ್ಲಾ ಅಪರಾಧಿಗಳ ಬಂಧನವನ್ನು ಖಚಿತಪಡಿಸುವಂತೆ ಸೂಚಿಸಿದ್ದೇನೆ. ಮಾತ್ರವಲ್ಲದೆ ಪೊಲೀಸರ ನಿರ್ಲಕ್ಷ್ಯದ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇಳಿದ್ದೇನೆ. ಸರ್ಕಾರದ ವತಿಯಿಂದ ಮಂದಿರದ ಪುನರ್ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಿದೆಯೆಂದು ಅವರು ಈ ಸಂದರ್ಭದಲ್ಲಿ ತಿಳಿಸಿದ್ದಾರೆ.

ಪಂಜಾಬ್ ಪ್ರಾಂತ್ಯದ ರಹೀಮ್ ಯಾರ್ ಖಾನ್ ಜಿಲ್ಲೆಯ ಭೋಂಗ್ ಎಂಬಲ್ಲಿನ ಹಿಂದೂ ದೇವಾಲಯ ಮೇಲಿನ ದಾಳಿ ಹಿನ್ನೆಲೆಯಲ್ಲಿ ಪ್ರಧಾನಿ ಇಮ್ರಾನ್ ವಿರುದ್ಧ ದೇಶದಾದ್ಯಂತ ವ್ಯಾಪಕ ಟೀಕಾಪ್ರಹಾರಗಳು ಭುಗಿಲೆದ್ದಿದೆ. ಮಾತ್ರವಲ್ಲದೆ ಪಾಕಿಸ್ತಾನದಲ್ಲಿರುವ ಅಲ್ಪಸಂಖ್ಯಾತರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವಂತೆ ಭಾರತ ಕೂಡಾ ಪಾಕಿಸ್ತಾನವನ್ನು ಒತ್ತಾಯಿಸಿದೆ. ಈ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರಾದ ಗುಲ್ಜಾರ್ ಅಹ್ಮದ್ ಅವರು, ಪಂಜಾಬ್ ಪ್ರಾಂತ್ಯದ ಪೊಲೀಸರಿಗೆ ಛೀಮಾರಿ ಹಾಕಿದ್ದಾರೆ. ಮಾತ್ರವಲ್ಲದೆ ದುಷ್ಕೃತ್ಯದಲ್ಲಿ ಭಾಗಿಯಾದ ಎಲ್ಲಾ ಆರೋಪಿಗಳನ್ನು ತಕ್ಷಣ ಬಂಧಿಸಿ ವರದಿ ಒಪ್ಪಿಸುವಂತೆ ಸೂಚಿಸಿದ್ದಾರೆ.

Join Whatsapp
Exit mobile version