ಬೆಂಗಳೂರು: ಕಳೆದೆರಡು ಕೊರೋನಾ ಅಲೆಗಳಿಗೆ ಹೋಲಿಸಿದರೆ ಮೂರನೇ ಅಲೆಯ ತೀವ್ರತೆ ಕಡಿಮೆ ಎಂದು ಹೇಳಲಾಗಿದ್ದು, ಇಂದು ಮಧ್ಯಾಹ್ನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ಕರೆದಿದ್ದಾರೆ.
ವೀಕೆಂಡ್ ಕರ್ಫ್ಯೂ ರದ್ದುಪಡಿಸಿದ್ದ ಸರ್ಕಾರ ಇದೀಗ ಫೆಬ್ರವರಿ ಒಂದರಿಂದ ಮತ್ತಷ್ಟು ನಿರ್ಬಂಧ ಸಡಿಲಿಕೆ ಮಾಡಲಿದೆಯೇ ಎಂಬ ಮಾತುಗಳು ಕೇಳಿಬರುತ್ತಿದೆ. ಸದ್ಯ ಕಠಿಣ ನಿಯಮಗಳನ್ನು ಸರ್ಕಾರ ಜಾರಿಗೆ ತಂದಿಲ್ಲ. ಕೇವಲ ನೈಟ್ ಕರ್ಫ್ಯೂ ಮತ್ತು 50:50 ರೂಲ್ಸ್ ಜಾರಿಯಲ್ಲಿದೆ.
ಈ ನಿಯಮವನ್ನು ಕೂಡ ಬೊಮ್ಮಾಯಿ ನೇತೃತ್ವದ ಸಚಿವ ಸಂಪುಟ ಸದಸ್ಯರು ತಜ್ಞರೊಂದಿಗೆ ಚರ್ಚಿಸಿ ರದ್ದುಪಡಿಸುವ ತೀರ್ಮಾನಕ್ಕೆ ಬರಲಿದೆಯೇ ಎಂಬ ಮಾತುಗಳು ಕೇಳಿಬರುತ್ತಿದೆ.
ಸಭೆಯಲ್ಲಿ ಆರೋಗ್ಯ ಸಚಿವರು, ಕಂದಾಯ ಸಚಿವರು, ಗೃಹ ಸಚಿವರು, ಉನ್ನತ ಶಿಕ್ಷಣ ಸಚಿವರು, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು, ಇಲಾಖಾ ಕಾರ್ಯದರ್ಶಿಗಳು, ಸರ್ಕಾರದ ಮುಖ್ಯ ಕಾರ್ಯದರ್ಶಿ, ಬಿಬಿಎಂಪಿ ಆಯುಕ್ತ, ಹಿರಿಯ ಪೊಲೀಸ್ ಅಧಿಕಾರಿಗಳು ಭಾಗಿಯಾಗಲಿದ್ದಾರೆ.