ಮಡಿವಾಳ ಸಮುದಾಯವನ್ನು ಎಸ್.ಸಿ.ಗೆ ಸೇರ್ಪಡೆ ಕುರಿತ ಅನ್ನಪೂರ್ಣ ವರದಿ ಜಾರಿಗೊಳಿಸಿ: ಎಂ.ಕೆ.ಹನುಮಂತಪ್ಪ ಆಗ್ರಹ

Prasthutha|

►ಫೆಬ್ರವರಿ ಒಂದರಂದು ಕೊಪ್ಪಳದಲ್ಲಿ ಅದ್ದೂರಿ ಮಡಿವಾಳ ಮಾಚಿದೇವ ಜಯಂತ್ಯೋತ್ಸವ

ಬೆಂಗಳೂರು: ಮಡಿವಾಳ ಸಮುದಾಯವನ್ನು ಎಸ್.ಸಿ.ಗೆ ಸೇರ್ಪಡೆ ಕುರಿತ ಅನ್ನಪೂರ್ಣ ವರದಿ ಜಾರಿಗೊಳಿಸಿ ಎಂದು ಉತ್ತರ ಕರ್ನಾಟಕ ಮಡಿವಾಳ ಸಂಘದ ಅಧ್ಯಕ್ಷ ಎಂ.ಕೆ.ಹನುಮಂತಪ್ಪ ಆಗ್ರಹಿಸಿದ್ದಾರೆ.

- Advertisement -

ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಡಿವಾಳ ಜನಾಂಗವನ್ನು 2ಎನಿಂದ ಎಸ್.ಸಿ ಪ್ರವರ್ಗಕ್ಕೆ ಸೇರ್ಪಡೆಗೊಳಿಸುವಂತೆ ಅನ್ನಪೂರ್ಣ ನೇತೃತ್ವದ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ. ರಾಜ್ಯ ಸರ್ಕಾರ, ಮುಖ್ಯಮಂತ್ರಿ ಗಳು ವರದಿಯ ಪ್ರಸ್ತಾಪವನ್ನು ಕೇಂದ್ರಕ್ಕೆ ಶಿಫಾರಸು ಮಾಡುವ ಮೂಲಕ ಅತ್ಯಂತ ಹಿಂದುಳಿದ ಮಡಿವಾಳ ಸಮುದಾಯವನ್ನು ಎಸ್.ಸಿ. ಪ್ರವರ್ಗಕ್ಕೆ ಸೇರಿಸಬೇಕು ಎಂದು ಆಗ್ರಹಿಸಿದರು.

ದೇಶದಲ್ಲಿ ವಿವಿಧ ರಾಜ್ಯಗಳಲ್ಲಿ ವಾಸವಾಗಿರುವ ಮಡಿವಾಳ ಸಮುದಾಯದವರನ್ನು ಈಗಾಗಲೇ ಎಸ್.ಸಿ.ವರ್ಗಕ್ಕೆ ಸೇರಿಸಲಾಗಿದೆ.ಅದರಂತೆ ರಾಜ್ಯದಲ್ಲೂ ಎಸ್.ಸಿ ಗೆ ಸೇರ್ಪಡೆ ಗೊಳಿಸಬೇಕು. ಈಗಾಗಲೇ ಮುಖ್ಯಮಂತ್ರಿ ಗಳನ್ನು ಖುದ್ದಾಗಿ ಬೇಟಿ ಮಾಡಿ ಮನವಿ ಸಲ್ಲಿಸಲಾಗಿದೆ ಎಂದರು.

ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮ ಅಧ್ಯಕ್ಷ ರಾಜು ಎಂ.ತಲೂರು ಮಾತನಾಡಿ, ಮಡಿವಾಳ ಅಭಿವೃದ್ಧಿ ನಿಗಮ ಸೇರಿದಂತೆ ಹಿಂದುಳಿದ ವರ್ಗಗಳ ನಿಗಮ ಮಂಡಳಿಗಳಿಗೆ ರಾಜ್ಯ ಸರ್ಕಾರ ಒಂದುನೂರು ಕೋಟಿ ರೂಪಾಯಿ ಹಣವನ್ನು ಒದಗಿಸಿದೆ ಯಾವುದೇ ಹಣಕಾಸಿನ ಕೊರತೆಯಿಲ್ಲ ಎಂದು ಹೇಳಿದರು.

ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮಗಳಿಗೆ ಸರ್ಕಾರ ಹಣ ಒದಗಿಸಿಲ್ಲ ಎಂಬುದು ನಿರಾಧಾರ. ಎಲ್ಲ ಅಭಿವೃದ್ಧಿ ನಿಗಮಗಳಿಗೆ ಉತ್ತಮ ಹಣಕಾಸಿನ ನೆರವು ನೀಡಿದೆ. ಮುಂಬರುವ ಬಜೆಟ್ ನಲ್ಲಿ ಮಡಿವಾಳ ಅಭಿವೃದ್ಧಿ ನಿಗಮಕ್ಕೆ ಐದುನೂರು ಕೋಟಿ ರೂಪಾಯಿ ಹಣ ಮೀಸಲಿಡುವಂತೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.

ಡಾ.ಬಸವ ಮಾಚೀದೇವ ಸ್ವಾಮೀಜಿ ಮಾತನಾಡಿ, ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮವನ್ನು ಕೊಪ್ಪಳದಲ್ಲಿ ಬರುವ ಫೆಬ್ರವರಿ ಒಂದರಂದು ಆಯೋಜಿಸಲಾಗಿದೆ. ಜಯಂತಿ ಕಾರ್ಯಕ್ರಮವನ್ನು ವಿಜೃಂಭಣೆ ಮತ್ತು ವೈಭವೋಪೇತವಾಗಿ ಆಚರಿಸಲು ಹಾಗೂ ಅವರ ತತ್ವ ಸಿದ್ದಾಂತಗಳು, ಆದರ್ಶಗಳನ್ನು ಇಂದಿನ ಪೀಳಿಗೆಗೆ ಪರಿಚಯಿಸುವಂತೆ ಮಡಿವಾಳ ಮಾಚಿದೇವರ ಜಯಂತಿಯನ್ನು ಆಚರಿಸಬೇಕಾಗಿದೆ. ಕೊಪ್ಪಳ ತಾಲೂಕು ಕ್ರೀಡಾಂಗಣದಲ್ಲಿ ಅದ್ದೂರಿಯಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಬೆಂಗಳೂರು ನಗರ ಮಡಿಕಟ್ಟೆ ಅಧ್ಯಕ್ಷ ರಾದ ಕೇಶವ, ಮಲ್ಲೇಶ್, ಕಾಂತರಾಜ್ ರಾಜಾಹುಲಿ,ಮುನಿರಾಜು, ಚಂದ್ರ ವಸಂತಪುರ ಮತ್ತಿತರರು ಹಾಜರಿದ್ದರು.

- Advertisement -