ಲವ್ ಜಿಹಾದ್ ಕುರಿತ ಹೇಳಿಕೆ ಶಾಂತಿ ಕದಡುವ ಪ್ರಯತ್ನ: ಮತಾಂತರ ಪೌರನ ಮೂಲಭೂತ ಹಕ್ಕು; ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್

Prasthutha|

ಬೆಂಗಳೂರು: ಮತಾಂತರ ನಿಷೇಧ ಕಾಯ್ದೆಯನ್ನು ತರುವ ನೆಪದಲ್ಲಿ ಅಸ್ತಿತ್ವದಲ್ಲಿರದ ಲವ್ ಜಿಹಾದ್ ಅನ್ನು ಉಲ್ಲೇಖಿಸುತ್ತಾ ಮುಖ್ಯಮಂತ್ರಿಯಾದಿಯಾಗಿ ಬಿಜೆಪಿ ಸಚಿವರು ನೀಡುತ್ತಿರುವ ಸರಣಿ ಹೇಳಿಕೆಗಳು ಸಮಾಜದಲ್ಲಿ ಶಾಂತಿ ಕದಡುವ ಪ್ರಯತ್ನವಾಗಿದ್ದು, ಬಿಜೆಪಿ ನಾಯಕರ ಈ ರೀತಿಯ ಹೇಳಿಕೆಗಳಿಗೆ ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ರಾಜ್ಯಾಧ್ಯಕ್ಷ ಮೌಲಾನಾ ಅತೀಕುರ್ ರಹ್ಮಾನ್ ಅಶ್ರಫಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

2009ರ ವೇಳೆಗೆ ಕಪೋಲಕಲ್ಪಿತ ಲವ್ ಜಿಹಾದ್ ಕುರಿತು ಭಾರೀ ಪ್ರಚಾರ ನಡೆಸಲಾದ ಸಂದರ್ಭದಲ್ಲಿ ಈ ವಿಚಾರದ ಕುರಿತು ಕರ್ನಾಟಕ ಸಿಐಡಿ ತನಿಖೆ ಕೈಗೆತ್ತಿಕೊಂಡಿತ್ತು. ಆದರೆ ಲವ್ ಜಿಹಾದ್ ಅಸ್ತಿತ್ವದಲ್ಲಿರುವುದರ ಕುರಿತು ಯಾವುದೇ ಪುರಾವೆ ಸಂಗ್ರಹಿಸಲು ಅದು ವಿಫಲವಾಗಿತ್ತು. ಅದೇ ರೀತಿ ಡಿಜಿಪಿ ಜೇಕಬ್ ಪೊನ್ನೋಸ್ ಲವ್ ಜಿಹಾದ್ ಗೆ ಯಾವುದೇ ಪುರಾವೆ ಇಲ್ಲ ಎಂಬ ಪ್ರಮಾಣ ಪತ್ರವನ್ನು 2009ರಲ್ಲಿ ಕೇರಳ ಹೈಕೋರ್ಟ್ ಗೆ ಸಲ್ಲಿಸಿದ್ದರು. ಮಾತ್ರವಲ್ಲ ಆ ನಂತರ 2 ವರ್ಷಗಳ ತನಿಖೆಯ ಬಳಿಕ ಕೇರಳ ಪೊಲೀಸ್ ಇದನ್ನು “ಅರ್ಥವಿಲ್ಲದ ಅಭಿಯಾನ” ಎಂದು ಹೇಳಿತ್ತು.  ಲವ್ ಜಿಹಾದ್ ಎಂದು ಬಿಂಬಿಸಲ್ಪಟ್ಟ ಪ್ರಕರಣದ ತನಿಖೆಗಳಲ್ಲಿ ಪ್ರೇಮ ವಿವಾಹಗಳ ವಿಚಾರವೇ ಬೆಳಕಿಗೆ ಬಂದಿತ್ತು. ಆದರೆ ಸಂಘಪರಿವಾರವು ಈ ವಿಚಾರವನ್ನು ಮುಸ್ಲಿಮ್ ಸಮುದಾಯದ ಅವಹೇಳನಕ್ಕಾಗಿ ನಿರಂತರವಾಗಿ ಬಳಸಿಕೊಂಡಿತು. 11 ಅಂತರ್ಧರ್ಮೀಯ ವಿವಾಹಗಳ ಬಗ್ಗೆ ತನಿಖೆ ನಡೆಸಿದ ಬಳಿಕವೂ ಎನ್ಐಎಗೆ ಯಾವುದೇ ಸಾಕ್ಷ್ಯಾಧಾರವನ್ನು ಕಂಡುಕೊಳ್ಳಲು ಸಾಧ್ಯವಾಗಲಿಲ್ಲ. ಕೊನೆಗೆ  ಎನ್ಐಎ ಕೂಡ ತನ್ನ ಶೋಧನೆಯಲ್ಲಿ ಲವ್ ಜಿಹಾದ್ ಅಸ್ತಿತ್ವದಲ್ಲಿಲ್ಲ ಎಂಬ ತೀರ್ಮಾನಕ್ಕೆ ಬಂದಿದೆ. ಲವ್ ಜಿಹಾದ್ ಅಭಿಯಾನದ ಬಲಿಪಶು ಡಾ.ಹಾದಿಯಾ ಸುಪ್ರೀಂ ಕೋರ್ಟ್ ವರೆಗೆ ಹೋಗಿ ನ್ಯಾಯ ಪಡೆಯಬೇಕಾಗಿ ಬಂದಿತ್ತು. ಅದೇ ರೀತಿ ಕೇಂದ್ರದ ಬಿಜೆಪಿ ಸರಕಾರವೂ ಲವ್ ಜಿಹಾದ್ ಪ್ರಕರಣಗಳು ವರದಿಯಾಗಿಲ್ಲ ಎಂಬ ಲಿಖಿತ ಉತ್ತರವನ್ನು ಈ ವರ್ಷದ ಫೆಬ್ರವರಿಯಲ್ಲಿ ಸಂಸತ್ತಿಗೆ ನೀಡಿರುವುದು ಗಮನಾರ್ಹ ಎಂದು ಅವರು ಹೇಳಿದ್ದಾರೆ.

ಉತ್ತರ ಪ್ರದೇಶ ಮಾದರಿಯಲ್ಲಿ ರಾಜ್ಯದ ಬಿಜೆಪಿ ಸರಕಾರವು ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತರಲು ಚಿಂತಿಸುತ್ತಿದೆ. ವಾಸ್ತವದಲ್ಲಿ ಈ ನಡೆಯು ಸಂವಿಧಾನವು ಪೌರರಿಗೆ ಕಲ್ಪಿಸಿರುವ ತನ್ನ ಇಚ್ಛೆಯ ಧರ್ಮವನ್ನು ಸ್ವೀಕರಿಸುವ, ಅದನ್ನು ಅನುಸರಿಸುವ ಮತ್ತು ಅದನ್ನು ಪ್ರಚಾರಪಡಿಸುವ ಧಾರ್ಮಿಕ ಸ್ವಾತಂತ್ರ್ಯದ ಹನನವಾಗಿದೆ. ಕಲ್ಪಿತ ಲವ್ ಜಿಹಾದ್ ಅನ್ನು ಪುನರಾವರ್ತಿಸುವ ಮೂಲಕ ಮತ್ತೆ ಮುಸ್ಲಿಮ್ ಸಮುದಾಯದ ತೇಜೋವಧೆ ನಡೆಸಲಾಗುತ್ತಿದೆ. ಲವ್ ಜಿಹಾದ್  ಮತಾಂಧ ಫ್ಯಾಶಿಸ್ಟ್ ಶಕ್ತಿಗಳ ದ್ವೇಷ ರಾಜಕಾರಣ ಮತ್ತು ವಿಭಜನಕಾರಿ ಅಜೆಂಡಾದ ಭಾಗವಾಗಿದ್ದು, ಕೋಮು ಧ್ರುವೀಕರಣಕ್ಕಾಗಿ ಅವರು ಇದನ್ನು ನಿರಂತರವಾಗಿ ಬಳಸಿಕೊಂಡು ಬಂದಿದ್ದಾರೆ. ಆಡಳಿತ ವೈಫಲ್ಯವನ್ನು ಮರೆ ಮಾಚಲು ಸಂಘಪರಿವಾರ-ಬಿಜೆಪಿ ಪ್ರತಿಬಾರಿಯೂ ಇಂತಹ ಭಾವನಾತ್ಮಕ ವಿಚಾರಗಳ ಮೊರೆ ಹೋಗುತ್ತಿರುವುದು ಸಾಬೀತಾಗಿರುವ ವಿಚಾರ. ಈ ನಿಟ್ಟಿನಲ್ಲಿ ರಾಜಕೀಯ ಲಾಭಕ್ಕಾಗಿ ನಡೆಸುವ ಬಿಜೆಪಿಯ ಇಂತಹ ಪಿತೂರಿಗಳ ಕುರಿತು ರಾಜ್ಯದ ಜನತೆ ಜಾಗೃತರಾಗಬೇಕು ಮತ್ತು ಮುಸ್ಲಿಮರನ್ನು ಬೇಟೆಯಾಡುವ ಇಂತಹ ಸುಳ್ಳು ಅಭಿಯಾನಗಳ ವಿರುದ್ಧ ಸಮುದಾಯವು ಧ್ವನಿ ಎತ್ತಬೇಕೆಂದು ಮೌಲಾನಾ ಅತೀಕುರ್ ರಹ್ಮಾನ್ ಅಶ್ರಫಿ ಕರೆ ನೀಡಿದ್ದಾರೆ.

Join Whatsapp