ಉಡುಪಿ: ರಾಜ್ಯದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಸಮವಸ್ತ್ರ ಕಡ್ಡಾಯಗೊಳಿಸುವುದೇ ನಿಯಮ ಬಾಹಿರ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ 2021-2022 ನೇ ಸಾಲಿನ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಮಾತ್ರವಲ್ಲ ಇದನ್ನು ಕಡ್ಡಾಯಗೊಳಿಸುವ ಯಾವುದೇ ಕಾಲೇಜಿನ ಪ್ರಿನ್ಸಿಪಾಲ್ ಅಥವಾ ಕಾಲೇಜು ಆಡಳಿತ ಮಂಡಳಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೂ ಇಲಾಖೆ ನೀಡಿದೆ.
ಪದವಿ ಪೂರ್ವ ಶಿಕ್ಷಣ ಇಲಾಖೆ ಬಿಡುಗಡೆಗೊಳಿಸಿರುವ 2021-2022 ನೇ ಸಾಲಿನ ಮಾರ್ಗಸೂಚಿಯಲ್ಲಿ ವಿಸ್ತೃತವಾಗಿ ಈ ಕುರಿತು ಮಾಹಿತಿಗಳಿದ್ದು, ಅದರಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸಮವಸ್ತ್ರವನ್ನು ಕಡ್ಡಾಯಗೊಳಿಸಿರುವುದಿಲ್ಲ. ಕಾಲೇಜಿನ ಪ್ರಾಂಶುಪಾಲರು ಮತ್ತು ಆಡಳಿತ ಮಂಡಳಿಯವರು ಸಮವಸ್ತ್ರವನ್ನು ಕಡ್ಡಾಯಗೊಳಿಸಿರುವುದು ನಿಯಮಬಾಹಿರವಾಗಿರುತ್ತದೆ ಹಾಗೂ ಮೇಲ್ಕಂಡ ಸೂಚನೆಗಳನ್ನು ಉಲ್ಲಂಘಿಸಿದ್ದಲ್ಲಿ ಅದನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಇದೀಗ ಸುದ್ದಿಯಾಗಿರುವ ಉಡುಪಿ ಸರಕಾರಿ ಕಾಲೇಜಿನ ಸ್ಕಾರ್ಫ್ ಪ್ರಕರಣದಲ್ಲಿ ಕಾಲೇಜು ಆಡಳಿತ ಮಂಡಳಿ ಹಾಗೂ ಪ್ರಿನ್ಸಿಪಾಲ್ ಎಡವಿರುವುದು ಕಂಡು ಬರುತ್ತಿದೆ. ಉಡುಪಿ ಶಾಸಕ ಹಾಗೂ ಕಾಲೇಜು ಅಡಳಿತ ಮಂಡಳಿಯಲ್ಲಿರುವ ರಘುಪತಿ ಭಟ್, ಇಂಗ್ಲೀಷ್ ಖಾಸಗಿ ವಾಹಿನಿಯಲ್ಲಿ ಮಾತನಾಡುತ್ತಾ, “ರಾಜ್ಯದ ಎಲ್ಲಾ ಪದವಿ ಪೂರ್ವ ಕಾಲೇಜಿನಲ್ಲಿ ಸಮವಸ್ತ್ರ ನಿಯಮವಿದೆ. ಅದು ಸಮವಸ್ತ್ರ ನಿಯಮ 1985ರ ಅನ್ವಯದಲ್ಲಿ ಜಾರಿಯಲ್ಲಿದೆ ಎಂಬರ್ಥದಲ್ಲಿ ತಪ್ಪು ಮಾಹಿತಿಯನ್ನು ನೀಡಿದ್ದರು. ಶಾಸಕ ಸ್ಥಾನದಲ್ಲಿ ಇರುವ ರಘುಪತಿ ಭಟ್ ಅವರು ಪದವಿ ಪೂರ್ವ ಶಿಕ್ಷಣ ಇಲಾಖೆ ಹೊರಡಿಸಿದ ಮಾರ್ಗಸೂಚಿಯನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ ಎನ್ನುವುದು ಗಂಭೀರ ವಿಚಾರವಾಗಿದೆ.
ಮತೀಯ ವಿಷಬೀಜವನ್ನು ಹರಡುವ ಬಿಜೆಪಿ ಹಾಗೂ ಸಂಘಪರಿವಾರದ ನಾಯಕರು ನಿಯಮವನ್ನು ಗಾಳಿಗೆ ತೂರಿ ಕೇವಲ ಹಿಜಾಬ್ ನೆಪದಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿರುವುದು ಈ ಪ್ರಕರಣದಲ್ಲಿ ಸ್ಪಷ್ಟವಾದಂತಾಗಿದೆ.