Home ಟಾಪ್ ಸುದ್ದಿಗಳು ಅಕ್ರಮ ಗಣಿಗಾರಿಕೆ ಹಗರಣ: ಶಾಸಕ ಬಿ ನಾಗೇಂದ್ರ ಸೇರಿ 8 ಉದ್ಯಮಿಗಳ ವಿರುದ್ಧ ಕ್ರಿಮಿನಲ್‌ ದೂರು...

ಅಕ್ರಮ ಗಣಿಗಾರಿಕೆ ಹಗರಣ: ಶಾಸಕ ಬಿ ನಾಗೇಂದ್ರ ಸೇರಿ 8 ಉದ್ಯಮಿಗಳ ವಿರುದ್ಧ ಕ್ರಿಮಿನಲ್‌ ದೂರು ದಾಖಲಿಸಲು ಆದೇಶ

ಬೆಂಗಳೂರು: ದಶಕದ ಹಿಂದೆ ರಾಜ್ಯಕ್ಕೆ ಕುಖ್ಯಾತಿ ತಂದಿದ್ದ ಬಳ್ಳಾರಿ ಅಕ್ರಮ ಗಣಿಗಾರಿಕೆ ಪ್ರಕರಣಗಳು ಮತ್ತೆ ಮುನ್ನೆಲೆಗೆ ಬರಲು ಆರಂಭಿಸಿವೆ. ಇತ್ತೀಚೆಗಷ್ಟೇ ಮಾಜಿ ಸಚಿವ ಜನಾರ್ದನ ರೆಡ್ಡಿ ವಿರುದ್ಧ ಕ್ರಿಮಿನಲ್‌ ಪ್ರಕರಣ ಹೂಡಲು ಆದೇಶಿಸಿದ್ದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಕಾಂಗ್ರೆಸ್‌ನ ಕೂಡ್ಲಗಿ ಶಾಸಕ ಬಿ ನಾಗೇಂದ್ರ ಸೇರಿದಂತೆ ಎಂಟು ಗಣಿ ಉದ್ಯಮಿಗಳ ವಿರುದ್ಧ ಕ್ರಿಮಿನಲ್‌ ದಾವೆ ಹೂಡಲು ಆದೇಶಿಸಿದ್ದು, ಎಲ್ಲರಿಗೂ ಸಮನ್ಸ್‌ ಜಾರಿ ಮಾಡಿದೆ (ಪೊಲೀಸ್‌ ವರಿಷ್ಠಾಧಿಕಾರಿ ವರ್ಸಸ್‌ ಸಂತೋಷ್‌ ರಾಜಾಪುರ).

ಲೋಕಾಯುಕ್ತ ವಿಶೇಷ ತನಿಖಾ ದಳದ (ಎಸ್‌ಐಟಿ) ಪೊಲೀಸ್‌ ವರಿಷ್ಠಾಧಿಕಾರಿ ನೀಡಿರುವ ಖಾಸಗಿ ದೂರಿನ ಅನ್ವಯ ವಿಚಾರಣೆ ನಡೆಸಿರುವ 62ನೇ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಮತ್ತು ಹಾಲಿ ಹಾಗೂ ಮಾಜಿ ಸಂಸದರು, ಶಾಸಕರ ವಿರುದ್ಧದ ಪ್ರಕರಣಗಳ ವಿಚಾರಣೆ ನಡೆಸುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ಪ್ರೀತ್‌ ಜೆ ಆದೇಶ ಮಾಡಿದ್ದಾರೆ.

“ಆರೋಪಿಗಳ ವಿರುದ್ಧ ತನಿಖಾಧಿಕಾರಿ ಅಥವಾ ದೂರುದಾರರು ಸಲ್ಲಿಸಿರುವ ದಾಖಲೆಗಳಲ್ಲಿ ಗಣಿ ಮತ್ತು ಖನಿಜ ಅಭಿವೃದ್ಧಿ ಮತ್ತು ನಿಯಂತ್ರಣಗಳ (ಎಂಎಂಡಿಆರ್‌) ಕಾಯಿದೆ 1957ರ ಸೆಕ್ಷನ್‌ 21 ಮತ್ತು 23 ಜೊತೆಗೆ 4(1), 4(1ಎ) ಅಡಿ ಮೇಲ್ನೋಟಕ್ಕೆ ಸಂಜ್ಞೇಯ ಪರಿಗಣನೆಗೆ (ಕಾಗ್ನಿಜೆನ್ಸ್‌) ತೆಗೆದುಕೊಳ್ಳುವ ಅಂಶಗಳು ಕಂಡು ಬಂದಿವೆ” ಎಂದು ಪೀಠವು ಆದೇಶದಲ್ಲಿ ಹೇಳಿದೆ.

ಹೀಗಾಗಿ, ಈಗಲ್‌ ಟ್ರೇಡರ್ಸ್‌ ಮತ್ತು ಲಾಜಿಸ್ಟಿಕ್ಸ್‌ ಪಾಲುದಾರರಾದ ಕಾಂಗ್ರೆಸ್‌ ಶಾಸಕ ಬಿ ನಾಗೇಂದ್ರ ಮತ್ತು ಕೆ ನಾಗರಾಜು, ಆರ್ಯನ್‌ ಮಿನರಲ್ಸ್‌ನ ಪಾಲುದಾರ ಸಂತೋಷ್‌ ರಾಜಾಪುರ, ಶ್ರೀ ದುರ್ಗಾ ಟ್ರೇಡ್‌ ಮತ್ತು ಲಾಜಿಸ್ಟಿಕ್ಸ್‌ ಆಡಳಿತಾಧಿಕಾರಿ ಮತ್ತು ದುರ್ಗಾ ಅಸೋಸಿಯೇಟ್ಸ್‌ ಮಾಲೀಕ ಚಂದ್ರಕಾಂತ್‌ ಕಾಮತ್‌, ಶ್ರೀನಿವಾಸ ಎಂಟರ್‌ಪ್ರೈಸಸ್‌ನ ಮಾಲೀಕ ಬಿ ರಾಜಕುಮಾರ್‌, ನಂದಿ ಎಂಟರ್‌ಪ್ರೈಸಸ್‌ ಮಾಲೀಕ ಡಿ ಸುರೇಶ್‌, ಪದ್ಮಾವತಿ ಕಮರ್ಷಿಯಲ್ಸ್‌ನ ಆಡಳಿತಾಧಿಕಾರಿ ಬಿ ಆರ್‌ ಗುರುರಾಜ್‌, ಜೈಸಿಂಗಾಪುರ ಸರ್ವೆ ನಂ.79ರ ವಲಯದ ಆಡಳಿತಾಧಿಕಾರಿ ನಂದಕುಮಾರ್‌ ಸಿಂಗ್‌ ಅವರ ವಿರುದ್ಧ ಗಣಿ ಮತ್ತು ಖನಿಜ ಅಭಿವೃದ್ಧಿ ಮತ್ತು ನಿಯಂತ್ರಣಗಳ (ಎಂಎಂಡಿಆರ್‌) ಕಾಯಿದೆ 1957ರ ಸೆಕ್ಷನ್‌ 21 ಮತ್ತು 23 ಜೊತೆಗೆ 4(1), 4(1ಎ) ಅಡಿ ಕ್ರಿಮಿನಲ್‌ ಪ್ರಕರಣ ದಾಖಲಿಸಬೇಕು ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.

2006ರ ಏಪಿಲ್‌ 1ರಿಂದ 2010ರ ಡಿಸೆಂಬರ್‌ 31ರ ಅವಧಿಯಲ್ಲಿ ಮೇಲೆ ಹೇಳಲಾದ ಎಂಟೂ ಮಂದಿ ಅಕ್ರಮ ಗಣಿಗಾರಿಕೆ ಆರೋಪಿಗಳು ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಯಾವುದೇ ಅನುಮತಿ ಅಥವಾ ಪರವಾನಗಿ ಪಡೆಯದೇ, ಸರ್ಕಾರಕ್ಕೆ ರಾಜಧನ ಮತ್ತಿತರ ತೆರಿಗೆ ಪಾವತಿಸದೇ ರೂ. 3,40,59,061, ರೂ. 1,93,66,708, ರೂ. 1,29,96,638 ಮೌಲ್ಯದ 12.023, 6.275, 4.367 ಮತ್ತು 7.656 ಮೆಟ್ರಿಕ್‌ ಟನ್‌ ಕಬ್ಬಿಣದ ಅದಿರನ್ನು ಕಾರವಾರ ಬಂದರಿಗೆ ಸಾಗಿಸಿದ್ದಾರೆ. ಈ ಮೂಲಕ 13.366 ಮೆಟ್ರಿಕ್‌ ಟನ್‌ ಕಬ್ಬಿಣದ ಅದಿರು ಅದಕ್ಕೆ ಸಂಬಂಧಿಸಿದ ರಾಜಧನ ಹಾಗೂ ಮತ್ತಿತರ ಶುಲ್ಕ ಪಾವತಿಸದೇ ಸರ್ಕಾರಕ್ಕೆ ವಂಚನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಎಂಟೂ ಮಂದಿಯ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ಈಗಾಗಲೇ ಆರೋಪ ಪಟ್ಟಿ ಸಲ್ಲಿಸಲಾಗಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳಾದ 379, 420, 465, 467, 468, 471 ಜೊತೆಗೆ 120(ಬಿ), ಭ್ರಷ್ಟಾಚಾರ ನಿಯಂತ್ರಣ ಕಾಯಿದೆ 1988ರ ಸೆಕ್ಷನ್‌ಗಳಾದ 7, 13(2) ಜೊತೆಗೆ 13(1)(ಡಿ), ಎಂಎಂಡಿಆರ್‌ ಕಾಯಿದೆ 1957ರ ಸೆಕ್ಷನ್‌ಗಳಾದ 21 ಮತ್ತು 23 ಜೊತೆಗೆ 4(1) ಮತ್ತು 4(1)(ಎ) ಅಡಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿಯು ಈಗಾಗಲೇ ಆರೋಪ ಪಟ್ಟಿ ಹಾಗೂ ಸಂಬಂಧಿತ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಇದು ಈ ಖಾಸಗಿ ದೂರಿಗೆ ಸಂಬಂಧಿಸಿದ್ದಾಗಿದೆ. ಮೇಲಿನ ದಾಖಲೆಗಳನ್ನೇ ದೂರುದಾರರು ಆಧರಿಸಿರುವುದರಿಂದ ಖಾಸಗಿ ದೂರಿನ ವಿಚಾರಣೆಯ ಸಂದರ್ಭದಲ್ಲಿ ಆ ದಾಖಲೆಗಳನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು ಎಂದು ಕೋರಲಾಗಿದೆ.

(ಕೃಪೆ: ಬಾರ್ ಆ್ಯಂಡ್ ಬೆಂಚ್)

Join Whatsapp
Exit mobile version