Home ಟಾಪ್ ಸುದ್ದಿಗಳು ದಕ್ಷಿಣ ಕನ್ನಡದಲ್ಲಿ ಮುಂದುವರಿದ ಅನೈತಿಕ ಗೂಂಡಾಗಿರಿ : ಜಾನುವಾರು ಸಾಗಾಟಗಾರರ ಕೊಲೆ ಯತ್ನ

ದಕ್ಷಿಣ ಕನ್ನಡದಲ್ಲಿ ಮುಂದುವರಿದ ಅನೈತಿಕ ಗೂಂಡಾಗಿರಿ : ಜಾನುವಾರು ಸಾಗಾಟಗಾರರ ಕೊಲೆ ಯತ್ನ

ಬಂಟ್ವಾಳ : ಜಾನುವಾರು ಸಾಗಾಟ ಮಾಡುತ್ತಿದ್ದ ವಾಹನವನ್ನು ತಡೆದ ಸಂಘಪರಿವಾರದ ಐವರು ಕಾರ್ಯಕರ್ತರು, ಜಾನುವಾರು ಸಾಗಿಸುತ್ತಿದ್ದ ನಾಲ್ವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿರುವ ಘಟನೆ ಬಂಟ್ವಾಳ ತಾಲೂಕಿನ ಅಳಿಕೆ ಗ್ರಾಮದ ಮುಳಿಯ ಎಂಬಲ್ಲಿ ನಡೆದಿದೆ.

ಸಂಘಪರಿವಾರದ ಕಾರ್ಯಕರ್ತರಾದ ಜಯ ಪ್ರಶಾಂತ, ಲಕ್ಷೀಶ ಹಾಗೂ ಉಳಿದ ಮೂವರು ಹಲ್ಲೆ ನಡೆಸಿದ ಆರೋಪಿಗಳು ಎಂದು ತಿಳಿದುಬಂದಿದೆ. ಹಲ್ಲೆಗೊಳಗಾದವರನ್ನು ಮಂಜೇಶ್ವರ ಬಾಕ್ರಬೈಲು ನಿವಾಸಿ ಇಬ್ರಾಹಿಂ, ಮೂಸಾ, ಕನ್ಯಾನ ನಿವಾಸಿ ಹಮೀದ್ ಹಾಗೂ ಸಾಲೆತ್ತೂರಿನ ಹಮೀದ್ ಎಂದು ಗುರುತಿಸಲಾಗಿದೆ. ಈ ಕುರಿತು ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಗಸ್ಟ್ 15ರಂದು ರಾತ್ರಿ ಈ ಘಟನೆ ನಡೆದಿದ್ದು, ಬೈಕ್ ಮತ್ತು ಕಾರಿನಲ್ಲಿ ಬಂದ ಐವರು ಸಂಘಪರಿವಾರದ ಕಾರ್ಯಕರ್ತರು ಜಾನುವಾರು ಸಾಗಾಟ ಮಾಡುತ್ತಿದ್ದ ಗೂಡ್ಸ್ ವಾಹನವನ್ನು ಅಡ್ಡಗಟ್ಟಿ ಅದರಲ್ಲಿದ್ದ ನಾಲ್ವರ ಮೇಲೆ ಬ್ಯಾಟ್ ಹಾಗೂ ಕತ್ತಿಯಿಂದ ಹಲ್ಲೆ ನಡೆಸಿ, ಜೀವಬೆದರಿಕೆ ಹಾಕಿ ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆಗೊಳಗಾದ ಮಂಜೇಶ್ವರ ನಿವಾಸಿ ಮೂಸಾ ವಿಟ್ಲ ಠಾಣೆಯಲ್ಲಿ ದೂರು ನೀಡಿದ್ದಾರೆ. ಆರೋಪಿಗಳ ವಿರುದ್ಧ ಐಪಿಸಿ ಕಲಂ 341,307,324,323,506,143,147,148,ಜೊತೆಗೆ 149 ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿದ ಪೊಲೀಸರು, `ಐದು ಜಾನುವಾರಗಳನ್ನು ಮುಳಿಯ ಎಂಬಲ್ಲಿ ಖರೀದಿಸಿ ಗೂಡ್ಸ್ ವಾಹನದಲ್ಲಿ ತುಂಬಿಕೊಂಡು ತೆರಳುತ್ತಿದ್ದಾಗ ಆರೋಪಿಗಳಾದ ಜಯ ಪ್ರಶಾಂತ, ಲಕ್ಷೀಶ ಮತ್ತು ಇತರ ಮೂವರು ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ’ ಎಂದು ತಿಳಿಸಿದ್ದಾರೆ.

ಸಂತ್ರಸ್ತರ ವಿರುದ್ಧವೂ ಪ್ರಕರಣ ದಾಖಲಾಗಿದ್ದು ಈ ಬಗ್ಗೆ ಮಾಹಿತಿ ನೀಡಿದ ಪೊಲೀಸರು, `ಪರವಾನಿಗೆ ಇಲ್ಲದೆ  ಜಾನುವಾರುಗಳನ್ನು ಸಾಗಾಟ ಮಾಡಿದ್ದಕ್ಕೆ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿ, ಕೃತ್ಯಕ್ಕೆ ಬಳಸಿದ ವಾಹನ ವಶಕ್ಕೆ ಪಡೆದುಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.

Join Whatsapp
Exit mobile version