Home ಟಾಪ್ ಸುದ್ದಿಗಳು ಪಿಎಸ್ ಐ ಅಕ್ರಮ ನೇಮಕ: ಬಂಧಿತರ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆ ಪ್ರಯೋಗ

ಪಿಎಸ್ ಐ ಅಕ್ರಮ ನೇಮಕ: ಬಂಧಿತರ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆ ಪ್ರಯೋಗ

ಬೆಂಗಳೂರು: 545ಮಂದಿ ಪೊಲೀಸ್ ಸಬ್ ಇನ್ಸ್ ಪೆಕ್ಟರ್ (ಪಿಎಸ್ ಐ) ನೇಮಕಾತಿ ಅಕ್ರಮದ ಸಂಬಂಧ ಬಂಧಿತರಾದವರ ಮೇಲೆ ಸಿಐಡಿ ಪೊಲೀಸರು ಭ್ರಷ್ಟಾಚಾರ ತಡೆ ಕಾಯ್ದೆ (ಪ್ರಿವೆನ್ಷನ್ ಆಫ್ ಕರಪ್ಷನ್ ಆಕ್ಟ್) ಅನ್ವಯ ಪ್ರಕರಣ ದಾಖಲಿಸಿದ್ದಾರೆ.

ಪಿಎಸ್ ಐ ನೇಮಕಾತಿ ಪ್ರಕರಣವನ್ನು ಸಿಐಡಿ ಪೊಲೀಸರು ತನಿಖೆ ನಡೆಸುತ್ತಿದ್ದು, ಪಿಎಸ್ ಐ ನೇಮಕಾತಿ ಹಗರಣದ ಸಂಬಂಧಿಸಿದಂತೆ  ಭ್ರಷ್ಟಾಚಾರ ತಡೆ ಕಾಯ್ದೆ ಪ್ರಕರಣ ದಾಖಲಿಸಿದ್ದಾರೆ.

ಪಿಎಸ್ ಐ ನೇಮಕಾತಿಯಲ್ಲಿ ಭಾರೀ ಭ್ರಷ್ಟಾಚಾರ ನಡೆದಿರುವುದು ದೃಡಪಟ್ಟಿದೆ. ಪಿಎಸ್ ಐ ನೇಮಕಾತಿಗಾಗಿಯೇ ಪಡೆದಿದ್ದ ಸುಮಾರು 1.5 ಕೋಟಿಗೂ ಹೆಚ್ಚಿನ ಹಣ ಪತ್ತೆಯಾಗಿದೆ. ಹೀಗಾಗಿ ಲಂಚ ನೀಡಿದವರು ಹಾಗೂ ಲಂಚ ಪಡೆದವರ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆ ಅಡಿಯಲ್ಲಿ ಸಹ ತನಿಖೆ ನಡೆಸಲು ಸಿಐಡಿ ಪೊಲೀಸರು ಮುಂದಾಗಿದ್ದಾರೆ.

ಬಂಧಿತರ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಿ ತನಿಖೆಯನ್ನು ಮುಂದುವರೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ

ಭ್ರಷ್ಟಾಚಾರ ತಡೆ ಕಾಯ್ದೆ ಹಾಕಿರುವ ಹಿನ್ನೆಲೆಯಲ್ಲಿ ಕೋರ್ಟ್ ಕೂಡ ಬದಲಾವಣೆಯಾಗಲಿದೆ. ಇದುವರೆಗೆ ಒಂದನೇ ಎಸಿಎಂಎಂ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದ್ದು,. ಇನ್ನು ಮುಂದೆ ಸಿಸಿಎಚ್ 23 ನೇ ನ್ಯಾಯಾಲಯದಲ್ಲಿ ಕೇಸ್ ನಡೆಯಲಿದೆ.

ಹಣ ವರ್ಗಾವಣೆ ಹಾಗೂ ಬೇನಾಮಿ ಆಸ್ತಿ ಪತ್ತೆಯಾದ ಹಿನ್ನೆಲೆಯಲ್ಲಿ ಇಡಿ ಸಹ ಪಿಎಸ್ ಐ ನೇಮಕಾತಿ ಹಗರಣದ ಪ್ರಕರಣದಲ್ಲಿ ಎಂಟ್ರಿಯಾಗಲಿದೆ. ಅಲ್ಲದೆ ಈಗಾಗಲೇ ಕೆಲ ಆರೋಪಿಗಳನ್ನು ಇಡಿ ವಿಚಾರಣೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.

Join Whatsapp
Exit mobile version