ಮಂಗಳೂರು: ರಾಷ್ಟ್ರಧ್ವಜವನ್ನು ಎಲ್ಲರೂ ಮನೆಗಳಲ್ಲಿ ಹಾಗೂ ಕಟ್ಟಡಗಳಲ್ಲಿ ಹಾರಾಟಕ್ಕೆ ತೊಂದರೆ ಇಲ್ಲ. ಆದರೆ ಧ್ವಜಸಂಹಿತೆಯನ್ನು ಪಾಲಿಸದಿದ್ದರೆ ಪ್ರಕರಣ ದಾಖಲಿಸಲಾಗುವುದು ಮತ್ತು ಜೈಲು ಶಿಕ್ಷೆ ಶತಸಿದ್ಧ ಎಂದು ದ.ಕ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ಎಚ್ಚರಿಸಿದ್ದಾರೆ.
ಧ್ವಜ ಸಂಹಿತೆ ಪ್ರಕಾರ, ರಾಷ್ಟ್ರಧ್ವಜಕ್ಕೆ ಅಗೌರವ, ನಾಶ, ಅಪಕೀರ್ತಿ, ಹರಿದು ಹಾಕಿದರೆ ಕ್ರಿಮಿನಲ್ ಕೇಸ್ ದಾಖಲಿಸಲು ಅವಕಾಶ ಇದೆ. ಇದಕ್ಕೆ ಯಾರ ಅನುಮತಿಗೆ ಕಾಯಬೇಕಾಗಿಲ್ಲ. ಯಾರೇ ನಾಗರಿಕ ದೂರು ನೀಡಿದರೂ ಸಾಕಾಗುತ್ತದೆ. ಪೊಲೀಸರು ಕ್ರಿಮಿನಲ್ ಕೇಸು ದಾಖಲಿಸಿ ಜೈಲಿಗೆ ಅಟ್ಟಲು ಅವಕಾಶ ಇದೆ. ಕನಿಷ್ಠ 3 ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ಹಾಗಾಗಿ ಆ.13ರಿಂದ 15ರ ವರೆಗೆ ಧ್ವಜಾರೋಹಣ ನಡೆಸಿ ಇಳಿಸಿದ ಬಳಿಕ ಧ್ವಜವನ್ನು ಎಸೆಯದೆ, ಜೋಪಾನವಾಗಿ ಮನೆಯಲ್ಲೇ ಇರಿಸಬೇಕು ಎಂದು ಡಾ. ಕುಮಾರ್ ಹೇಳಿದರು.
ಅಪಾರ್ಟ್ಮೆಂಟ್ ಹೊರತುಪಡಿಸಿ ನಗರ ಪಾಲಿಕೆ ಹಾಗೂ ಸ್ಥಳೀಯ ಆಡಳಿತಗಳಲ್ಲಿ ಒಟ್ಟು 1.60 ಲಕ್ಷ ಮನೆಗಳಿವೆ. ಗ್ರಾಮೀಣ ಭಾಗದಲ್ಲಿ 2.90 ಲಕ್ಷ ಮನೆಗಳಿದ್ದು, ಸರ್ಕಾರಿ ಕಚೇರಿ, ಇತರೆ ಕಟ್ಟಡ ಸೇರಿ ಒಟ್ಟು 4.60 ಲಕ್ಷ ಕಟ್ಟಡಗಳಿವೆ. ಸಂಜೀವಿನಿ ಒಕ್ಕೂಟದಡಿ 6 ಸಾವಿರ ಸ್ತ್ರೀಶಕ್ತಿ ಗುಂಪುಗಳಿದ್ದು, 66 ಸಾವಿರ ಸದಸ್ಯರಿದ್ದಾರೆ. ಇದರಲ್ಲಿ 256 ಸ್ತ್ರೀಶಕ್ತಿ ಗುಂಪುಗಳಿಗೆ ರಾಷ್ಟ್ರಧ್ವಜ ತಯಾರಿಕೆಗೆ ರುಡ್ ಸೆಟ್ನಿಂದ ತರಬೇತಿ ನೀಡಲಾಗಿದೆ. 75 ಕಡೆಗಳಲ್ಲಿ ಸಂಜೀವಿನಿ ಒಕ್ಕೂಟ ಸದಸ್ಯರು ರಾಷ್ಟ್ರಧ್ವಜ ಸಿದ್ಧಪಡಿಸುವ ಕೆಲಸ ಮಾಡುತ್ತಿದ್ದಾರೆ. ಪ್ರಥಮ ಹಂತದಲ್ಲಿ 1.50 ಲಕ್ಷ ರಾಷ್ಟ್ರಧ್ವಜ ಸಿದ್ಧವಾಗಿದ್ದು, 2ನೇ ಹಂತದಲ್ಲಿ 1 ಲಕ್ಷ ಧ್ವಜ ತಯಾರಾಗುತ್ತಿದೆ ಎಂದರು.
ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಮಾತನಾಡಿ, ಇನ್ನು ಒಂದು ವಾರದೊಳಗೆ ಜಿಲ್ಲೆಯಲ್ಲಿ ಎಲ್ಲರ ಮನೆಗಳಿಗೆ ರಾಷ್ಟ್ರಧ್ವಜವನ್ನು ತಲುಪಿಸಬೇಕು. ಧ್ವಜ ಸಂಹಿತೆಯನ್ನು ಎಲ್ಲರೂ ಪಾಲಿಸಬೇಕಾಗಿದ್ದು, ಅಶಿಸ್ತಿನಿಂದ ವರ್ತಿಸುವಂತಿಲ್ಲ. ಜನಪ್ರತಿನಿಧಿಗಳು ಈ ಬಗ್ಗೆ ಜನರಲ್ಲಿ ಹೆಚ್ಚಿನ ಅರಿವು ಮೂಡಿಸಬೇಕು. ಹರಿದ, ಕೊಳಕು ಧ್ವಜವನ್ನು ಆರೋಹಣ ಮಾಡಬಾರದು. ಸೊಂಟದ ಕೆಳಗೂ ಧ್ವಜ ಬಣ್ಣದ ವಸ್ತ್ರವನ್ನು ಧರಿಸುವಂತಿಲ್ಲ ಎಂದರು.
ಮಂಗಳೂರು ಮೇಯರ್ ಪ್ರೇಮಾನಂದ ಶೆಟ್ಟಿ, ಉಪ ಮೇಯರ್ ಸುಮಂಗಲಾ ರಾವ್, ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್, ಮಂಗಳೂರು ಸಹಾಯಕ ಆಯುಕ್ತ ಮದನಮೋಹನ್, ಪುತ್ತೂರು ಸಹಾಯಕ ಆಯುಕ್ತ ಗಿರೀಶ್ ನಂದನ್ ವೇದಿಕೆಯಲ್ಲಿದ್ದರು.
ಇದೇ ಸಂದರ್ಭದಲ್ಲಿ ಜಿಲ್ಲೆಯ ವಿವಿಧ ಗ್ರಾಮ ಪಂಚಾಯತ್ ಗಳು ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರು, ಉಪಾಧ್ಯಕ್ಷರಿಗೆ ಮತ್ತು ಮಂಗಳೂರು ನಗರ ಪಾಲಿಕೆಯ ಜನಪ್ರತಿನಿಧಿಗಳಿಗೆ ಧ್ವಜವನ್ನು ಹಸ್ತಂತರಿಸಲಾಯಿತು.