►ಹಿಜಾಬ್ ಧರಿಸಿ ನಾನು ವಿಧಾನಸಭೆಗೆ ಪ್ರವೇಶಿಸಲು ಸಾಧ್ಯವಾಗುವುದಾದರೆ ಇವರಿಗೇಕೆ ಅವಕಾಶ ನಿರಾಕರಣೆ
ಬೆಂಗಳೂರು: ಹಿಜಾಬ್ ಧರಿಸಿ ನಾನು ವಿಧಾನಸಭೆಗೆ ಪ್ರವೇಶಿಸಲು ಸಾಧ್ಯವಾಗುವುದಾದರೆ ಈ ಹುಡುಗಿಯರಿಗೇಕೆ ಶಾಲೆ ಅಥವಾ ಕಾಲೇಜಿನಲ್ಲಿ ಹಿಜಾಬ್ ಧರಿಸಿ ಪ್ರವೇಶಿಸಲು ಅವಕಾಶ ನಿರಾಕರಿಸಲಾಗುತ್ತದೆ ಎಂದು ಕಾಂಗ್ರೆಸ್ ಶಾಸಕಿ ಕನೀಝ್ ಫಾತಿಮಾ ಪ್ರಶ್ನಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಇದ್ದಕ್ಕಿದ್ದಂತೆ ಶಿಕ್ಷಣ ಸಂಸ್ಥೆಗಳನ್ನು ಕೇಸರೀಕರಣಗೊಳಿಸುವ ಪ್ರಯತ್ನ ಏಕೆ ನಡೆಯುತ್ತಿದೆ? ಹಿಜಾಬ್ ನಮ್ಮ ಹಕ್ಕು. ನಾವು ನಮ್ಮ ಜೀವಗಳನ್ನು ಬೇಕಾದರೆ ನೀಡುತ್ತೇವೆ, ಆದರೆ ನಾವು ಹಿಜಾಬ್ ಅನ್ನು ಬಿಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಉಡುಪಿ ಮತ್ತು ಕುಂದಾಪುರದಲ್ಲಿ ಹಿಜಾಬ್ ಧರಿಸಲು ಅವಕಾಶ ನಿರಾಕರಿಸಿದ್ದಕ್ಕೆ ಪ್ರತಿಭಟನೆ ನಡೆಸಿದ ವಿದ್ಯಾರ್ಥಿನಿಯರನ್ನು ಉದ್ದೇಶಿಸಿ “ಧೈರ್ಯಶಾಲಿ ಹುಡುಗಿಯರಿಗೆ ಅಭಿನಂದನೆಗಳು” ಎಂದು ಶಾಸಕಿ ಟ್ವೀಟ್ ಮಾಡಿದ್ದಾರೆ.
ಕಲಬುರಗಿ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕಿಯಾಗಿರುವ ಕನೀಝ್ ಫಾತಿಮಾ ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ.