ಸರ್ಕಾರಕ್ಕೆ ದಮ್‌ ಇದ್ದರೆ ಶಾಂತಿ ಕದಡುವ ಸಂಘಟನೆಗಳಾದ ಆರ್‌ಎಸ್‌ಎಸ್, ಬಜರಂಗದಳ ಸಂಘಟನೆಗಳನ್ನು ನಿಷೇಧಿಸಲಿ: ಸಿದ್ದರಾಮಯ್ಯ

Prasthutha|

- Advertisement -

ಹುಬ್ಬಳ್ಳಿ: ಹುಬ್ಬಳ್ಳಿ ಗಲಭೆ ಹಿಂದೆ ಸಂಘಟನೆಗಳ ಕೈವಾಡವಿದ್ದರೆ ಅವುಗಳ ಮೇಲೆ ರಾಜ್ಯ ಸರ್ಕಾರ ನಿಷೇಧ ಹೇರಲಿ, ಬೇಡ ಎಂದವರು ಯಾರು? ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದರು. ಶುಕ್ರವಾರ ಇಲ್ಲಿನ ವಿಮಾನನಿಲ್ದಾಣದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ’ಸರ್ಕಾರಕ್ಕೆ ದಮ್‌ ಇದ್ದರೆ ಶಾಂತಿ ಕದಡುವ ಸಂಘಟನೆಗಳನ್ನು ನಿಷೇಧಿಸಬೇಕು. ಆರ್‌ಎಸ್‌ಎಸ್, ಬಜರಂಗದಳ, ಎಐಎಂಐಎಂಗಳನ್ನು ನಿಷೇಧ ಮಾಡಿ‘ ಎಂದರು.

ಜವಾಬ್ದಾರಿಯುತ ಸ್ಥಾನದಲ್ಲಿರುವ ಗೃಹಸಚಿವ ಆರಗ ಜ್ಞಾನೇಂದ್ರ ಮೇಲಿಂದ ಮೇಲೆ ಬೇಜವಾಬ್ದಾರಿಯುತ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಕಾಪಾಡುವುದು ಗೃಹ ಇಲಾಖೆಯ ಕೆಲಸ. ಆದರೆ, ಆ ಇಲಾಖೆ ಸಚಿವರೇ ಸಮಾಜದ ಶಾಂತಿ ಭಂಗ ಮಾಡುತ್ತಿದ್ದಾರೆ. ಅವರು ರಾಜೀನಾಮೆ ಕೊಟ್ಟು ಹೋಗಲಿ ಎಂದು ಒತ್ತಾಯಿಸಿದರು.

- Advertisement -

ಹುಬ್ಬಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ’ಯಾರೊ ಒಬ್ಬರು ತಪ್ಪು ಮಾಡಿದ್ದಾರೆ ಎಂದಾಕ್ಷಣ ಎಲ್ಲರನ್ನೂ ಒಂದೇ ರೀತಿ ನೋಡುವುದು ಸರಿಯಲ್ಲ. ಎಲ್ಲಾ ತಪ್ಪಿತಸ್ಥರಿಗೂ ಶಿಕ್ಷೆಯಾಗಬೇಕು. ನಿರಪರಾಧಿಗಳ ಮೇಲೆ ಕ್ರಮ ಕೈಗೊಳ್ಳಬೇಡಿ‘ ಎಂದರು.

ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ ಎಸಗಿರುವುದು ಜಾಮೀನು ರಹಿತ ಅಪರಾಧ, ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಈಗ ತನಿಖೆ ನಡೆಯುತ್ತಿದೆ, ತನಿಖೆ ನಿಷ್ಪಕ್ಷಪಾತವಾಗಿ ನಡೆಯಲಿ. ಆ ನಂತರ ಅಪರಾಧಿಗಳ ಮೇಲೆ ಕಾನೂನು ಕ್ರಮ ಜರುಗಿಸಲಿ ಎಂದರು.

ಕೇಜ್ರೀವಾಲ್ ಅವರು ರಾಜ್ಯ ಸರ್ಕಾರದ ಮೇಲೆ 40% ಕಮಿಷನ್ ಆರೋಪ ಮಾಡಿರುವುದಕ್ಕೆ ಸಂಬಂಧಿಸಿದಂತೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ತೀರ್ಮಾನವನ್ನು ಜನಗಳಿಗೆ ಬಿಡೋಣ, ಈ 40% ಕಮಿಷನ್ ಸರ್ಕಾರವನ್ನು ಕಿತ್ತು ಹಾಕಿ ಎಂದು ನಾವೂ ಹೇಳುತ್ತಿದ್ದೀವಿ, ಜನರೇ ತೀರ್ಮಾನ ಮಾಡಲಿ ಎಂದು ಹೇಳಿದರು.

ಆಪ್ ಪಕ್ಷದ ಬಗ್ಗೆ ನಾನು ಮಾತನಾಡಲ್ಲ, ಅದು ಕೂಡ ಬಹಳ ವರ್ಷಗಳಿಂದ ರಾಜಕೀಯದಲ್ಲಿದೆ. ದೊಡ್ಡ ಪಕ್ಷ ಅದು. ರಾಜ್ಯದಲ್ಲಿ ಅವರು ಇವತ್ತಿನವರೆಗೆ ಚುನಾವಣೆ ಎದುರಿಸಿರಲಿಲ್ಲ, ಕೇಜ್ರೀವಾಲ್ ಬಂದು ನಮ್ಮ ಅಭ್ಯರ್ಥಿಗಳನ್ನು ಚುನಾವಣೆಗೆ ಹಾಕ್ತೀವಿ ಎಂದಿದ್ದಾರೆ, ಹಾಕಲಿ ಜನ ತೀರ್ಮಾನ ಮಾಡುತ್ತಾರೆ.

ಯಾರೊ ಒಬ್ಬ ಮೌಲ್ವಿ ತಪ್ಪು ಮಾಡಿದ್ದಾರೆ ಎಂದರೆ ಎಲ್ಲಾ ಮೌಲ್ವಿಗಳು ತಪ್ಪು ಮಾಡ್ತಾರೆ ಎಂದು ಅರ್ಥವಲ್ಲ. ಅವರು ಮೌಲ್ವಿ ಹೌದೋ ಅಲ್ಲವೋ ಎಂಬುದು ನನಗೂ ಗೊತ್ತಿಲ್ಲ. ಇದರಿಂದ ಇನ್ನಷ್ಟು ಕೆಸರೆರಚುವ ಕೆಲಸ ಮಾಡುತ್ತಾರೆ. ಸಮಾಜದಲ್ಲಿ ಶಾಂತಿ ನೆಲೆಸುವ ಕೆಲಸ ಸರ್ಕಾರ ಮಾಡಬೇಕು. ಶಾಂತಿ ಕದಡುವ ಪ್ರಯತ್ನ ಯಾರೂ ಮಾಡಬಾರದು.

ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರು ಕಾಂಗ್ರೆಸ್ ಪರವಾಗಿ ರಾಜ್ಯದ ಚುನಾವಣೆ ಕಾರ್ಯತಂತ್ರ ರೂಪಿಸುವ ಬಗ್ಗೆ ನನಗೆ ಮಾಹಿತಿ ಇಲ್ಲ. ವೈಯಕ್ತಿಕವಾಗಿ ಮಾಹಿತಿ ಇಲ್ಲದೆ ಈ ಬಗ್ಗೆ ಪ್ರತಿಕ್ರಿಯೆ ನೀಡುವುದು ಸರಿಯಲ್ಲ ಎಂದರು.

Join Whatsapp
Exit mobile version