Home ಕರಾವಳಿ ಶಾಲಾ-ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ಘೋಷಿಸಿದರೆ ಅದನ್ನು ಕಡ್ಡಾಯವಾಗಿ ಪಾಲಿಸಬೇಕು: ದ.ಕ. ಜಿಲ್ಲಾಧಿಕಾರಿ

ಶಾಲಾ-ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ಘೋಷಿಸಿದರೆ ಅದನ್ನು ಕಡ್ಡಾಯವಾಗಿ ಪಾಲಿಸಬೇಕು: ದ.ಕ. ಜಿಲ್ಲಾಧಿಕಾರಿ

ಮಂಗಳೂರು: ಜಿಲ್ಲೆಯಲ್ಲಿ ಪ್ರಸಕ್ತವಾಗಿ ಅತಿ ಹೆಚ್ಚು ಪ್ರಮಾಣದ ಮಳೆಯಾಗುತ್ತಿರುವುದರಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳ ಸುರಕ್ಷತೆ ಹಾಗೂ ಮುನ್ನೆಚ್ಚರಿಕಾ ಕ್ರಮವಾಗಿ ರಜೆ ನೀಡಲಾಗುತ್ತಿದೆ, ಅದನ್ನು ಸಂಬಂಧಿಸಿದ ಕಾಲೇಜುಗಳ ಆಡಳಿತ ಮಂಡಳಿವರು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಅವರು ಜಿಲ್ಲೆಯ ಎಲ್ಲಾ ಎಂಜಿನಿಯರಿಂಗ್ ಕಾಲೇಜುಗಳ ಮುಖ್ಯಸ್ಥರು ಹಾಗೂ ಪ್ರಾಂಶುಪಾಲರಿಗೆ ತಾಕೀತು ಮಾಡಿದರು.


ಅವರು ಶುಕ್ರವಾರ ನಗರದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಪ್ರಾಕೃತಿ ವಿಕೋಪ ನಿರ್ವಹಣೆಯಡಿ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಜಿಲ್ಲೆಯ ಇಂಜಿನಿಯರಿಂಗ್ ಕಾಲೇಜುಗಳ ಪ್ರಾಂಶುಪಾಲರೊಂದಿಗೆ ಹಮ್ಮಿಕೊಳ್ಳಲಾದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ಜಿಲ್ಲೆಯ ಎಲ್ಲಾ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಕಾಲೇಜಿಗೆ ಬರುವ ವ್ಯವಸ್ಥೆಯನ್ನು ಮೊದಲು ಸಮೀಕ್ಷೆ ಮಾಡಬೇಕು, ಅವರು ಹಳ್ಳಿ, ಹಾಸ್ಟೆಲ್ ನಿಂದ ಅಥವಾ ಇತರೆ ವ್ಯವಸ್ಥೆಗಳು ಸೇರಿದಂತೆ ಕಾಲೇಜಿಗೆ ಹೇಗೆ ಬರುತ್ತಿದ್ದಾರೆ ಎಂಬುದನ್ನು ಕಂಡುಕೊಳ್ಳಬೇಕು, ಜಿಲ್ಲಾಡಳಿತ ರಜೆ ಘೋಷಿಸಿದಾಗ ಕಡ್ಡಾಯವಾಗಿ ರಜೆ ನೀಡಲೇಬೇಕು, ಉಲ್ಲಂಘಿಸಿದ್ದಲ್ಲೀ ವಿಪತ್ತು ನಿರ್ವಹಣಾ ಅಧಿನಿಯಮದ 24-34ರ ನಿಯಮಗಳನುಸಾರ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು. ಜಿಲ್ಲಾಡಳಿತ ಒಂದು ಭಾರಿ ಆದೇಶ ಹೊರಡಿಸಿದರೆ ಅದು ಅಧಿಕೃತ ಹಾಗೂ ಅಂತಿಮ ಅದನ್ನು ಕಡ್ಡಾಯವಾಗಿ ಪಾಲಿಸಲೇಬೇಕು ಎಂದು ಎಚ್ಚರಿಕೆ ನೀಡಿದರು.


ಈ ಸಂದರ್ಭದಲ್ಲಿ ಮಂಗಳೂರು ಮಹಾ ನಗರ ಪಾಲಿಕೆ ಪ್ರಭಾರ ಆಯುಕ್ತ ಪ್ರಶಾಂತ್ ಮಿಶ್ರ, ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸುಧಾಕರ್, ಮಂಗಳೂರು ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಎಸ್. ಗುರುಪ್ರಸಾದ್, ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲ ಡಾ. ಮಂಜುನಾಥ್ ಸೇರಿದಂತೆ ವಿವಿಧ ಕಾಲೇಜಿನ ಮುಖ್ಯಸ್ಥರು ಹಾಗೂ ಪ್ರಾಂಶುಪಾಲರುಗಳು ಉಪಸ್ಥಿತರಿದ್ದರು.

Join Whatsapp
Exit mobile version