ಸಂಘಪರಿವಾರ ಕ್ರಿಮಿನಲ್ ಗಳ ಮೇಲಿನ ಕೇಸ್ ವಾಪಸ್ ಪಡೆದರೆ ರಾಜ್ಯಾದ್ಯಂತ ಉಗ್ರ ಹೋರಾಟ: ಎಸ್‌ ಡಿಪಿಐ

Prasthutha|

ಬೆಂಗಳೂರು: ಬಿಜೆಪಿ ಕಾರ್ಯಕರ್ತರ ಆಕ್ರೋಶವನ್ನು ತಣಿಸಲು ಸಂಘಪರಿವಾರ ಕಾರ್ಯಕರ್ತರ ಮೇಲೆ 2019 ರ ನಂತರ ಆದ ಕೇಸ್ ಗಳನ್ನು ವಾಪಸ್ ಪಡೆಯಲು ನಿರ್ಧರಿಸಿರುವ ರಾಜ್ಯ ಸರ್ಕಾರದ ನಿರ್ಧಾರ ಖಂಡನೀಯ ಹಾಗೂ ಒಂದು ವೇಳೆ ಇದನ್ನು ಅಂಗೀಕಾರ ಮಾಡಿ ಜಾರಿಗೆ ತಂದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದೆಂದು ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮೈಸೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಳೆದ ಐದು ತಿಂಗಳ ಹಿಂದೆ ಕೂಡ ಸಂಘಪರಿವಾರ ನಾಯಕರ ದ್ವೇಷ ಭಾಷಣ, ಮತ್ತಿತರ ಗಂಭೀರ ಅಪರಾಧ ಗಳಿಗೆ ಸಂಬಂಧಿಸಿ 330 ಪ್ರಕರಣಗಳನ್ನು ವಾಪಸ್ ಪಡೆದು ಅಶಾಂತಿ ಸೃಷ್ಟಿಸುವ ಸಂಘಪರಿವಾರ ಕಾರ್ಯಕರ್ತರಿಗೆ ಮತ್ತು ನಾಯಕರಿಗೆ ಮತ್ತಷ್ಟು ಅರಾಜಕತೆ ಸೃಷ್ಟಿಸಲು ನೇರವಾಗಿ ಪ್ರೇರಣೆ ನೀಡಿತ್ತು.

- Advertisement -


ಬಿಜೆಪಿ-ಸಂಘಪರಿವಾರದ ನಾಯಕರು ರಾಜಕೀಯ ಲಾಭಕ್ಕಾಗಿ ದ್ವೇಷ ಭಾಷಣ ಮಾಡಿ ಅಶಾಂತಿ ಹರಡುವುದು, ಗಲಭೆ- ಹಿಂಸಾಚಾರಕ್ಕೆ ಪ್ರಚೋದನೆ ನೀಡುವುದು ಹಿಂದಿನಿಂದಲೂ ನಡೆಸಿಕೊಂಡು ಬರುತ್ತಿದೆ. ಅವರ ವಿರುದ್ಧ ದೂರು ದಾಖಲಿಸಿದರೆ ಪ್ರಕರಣ ದಾಖಲಿಸಿಕೊಳ್ಳಲು ಮೀನಾಮೇಷ ಎಣಿಸಲಾಗುತ್ತದೆ.

ಪ್ರಕರಣ ದಾಖಲಾದರೆ ಅದನ್ನು ಸಚಿವ ಸಂಪುಟದಲ್ಲಿ ಹಿಂಪಡೆದುಕೊಳ್ಳುವ ಪ್ರವೃತ್ತಿ ಬೆಳೆದು ಬರುತ್ತಿದೆ. ಶಾಂತಿ ಭಂಗ, ಗಲಭೆ, ಗಲಭೆಗೆ ಪ್ರಚೋದನೆ ನೀಡಿದ ಆರೋಪದಡಿ ಬಿಜೆಪಿ ನಾಯಕರ ಸಹಿತ ಸಾವಿರಾರು ಮಂದಿ ಕಾರ್ಯಕರ್ತರ ಮೇಲಿನ ಗಂಭೀರ ಪ್ರಕರಣಗಳನ್ನು ಈ ಮೊದಲು ವಾಪಸ್ ಪಡೆಯಲಾಗಿತ್ತು. ಮುಸ್ಲಿಮರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುವುದು, ದ್ವೇಷ ಭಾಷಣದ ಮೂಲಕ ಹಿಂದು-ಮುಸ್ಲಿಮರ ನಡುವೆ ಪರಸ್ಪರ ಅಪನಂಬಿಕೆ ಸೃಷ್ಟಿಸುವುದು ಮತ್ತು ದುಷ್ಕೃತ್ಯಗಳಿಗೆ ಪ್ರಚೋದನೆ ನೀಡುವಂತಹ ಗುರುತರವಾದ ಅಪರಾಧ ಪ್ರಕರಣಗಳನ್ನು ಹಿಂಪಡೆದುಕೊಂಡು ಬಿಜೆಪಿ ಸರಕಾರ ಸಮಾಜಕ್ಕೆ ಯಾವ ರೀತಿಯ ಸಂದೇಶವನ್ನು ನೀಡುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು.

ಈ ಹಿಂದೆ ಕಾನೂನು ಇಲಾಖೆ, ರಾಜ್ಯ ಪೊಲೀಸ್ ಮಹಾ ನಿರ್ದೇಶಕರು, ಸರಕಾರಿ ವ್ಯಾಜ್ಯಗಳ ಇಲಾಖೆಯ ಅಭಿಪ್ರಾಯವನ್ನು ಕಡೆಗಣಿಸಿ ಈ ಹಿಂದೆ ರಾಜ್ಯ ಸರಕಾರವು ಸಂಘಪರಿವಾರದ ಕಾರ್ಯಕರ್ತರ ಮೇಲಿನ ಪ್ರಕರಣಗಳನ್ನು ಮೇಲಿನ ಗಂಭೀರ ಸ್ವರೂಪದ ಪ್ರಕರಣಗಳನ್ನು ರದ್ದುಪಡಿಸಿತ್ತು. ಕೇಸ್ ವಾಪಸ್ ಪಡೆಯುವ ಅಪಾಯಕಾರಿ ಪ್ರವೃತ್ತಿಯು ಕಾನೂನು ಸುವ್ಯವಸ್ಥೆಗೆ ಸವಾಲೆಸೆಯುವ ಮೂಲಕ ರಾಜ್ಯವನ್ನು ಅರಾಜಕತೆಗೆ ತಳ್ಳಿ ಬಿಡಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಅಭಿವೃದ್ಧಿಯ ವಿಚಾರದಲ್ಲಿ ಪ್ರತಿಭಟನೆ, ಹೋರಾಟ ನಡೆಸಿದ ಸಾಮಾಜಿಕ ಕಾರ್ಯಕರ್ತರ ಮೇಲಿನ ಕೇಸು ವಾಪಸ್ ಪಡೆಯಲು ಅವಕಾಶವಿದೆ. ಆದರೆ ರಾಜ್ಯದ ಬಿಜೆಪಿ ಸರಕಾರವು ಇದನ್ನು ದುರ್ಬಳಕೆ ಮಾಡಿಕೊಂಡು ತನ್ನ ಅನುಕೂಲಕ್ಕೆ ತಕ್ಕಂತೆ ಬಳಸುತ್ತಿರುವುದು ಕಳವಳಕಾರಿಯಾಗಿದೆ.

ಕೇಸ್ ಹಿಂಪಡೆದುಕೊಂಡು ಕ್ರಿಮಿನಲ್ ಗಳನ್ನು ಪೋಷಿಸುವ ಬಿಜೆಪಿ ಸರಕಾರ ರಾಜ್ಯವನ್ನು ಗೂಂಡಾ ರಾಜ್ ಆಗಿ ಪರಿವರ್ತಿಸುತ್ತಿದೆ. ಇಂತಹ ದುಷ್ಟ ಪ್ರಯತ್ನಗಳನ್ನು ವಿಫಲಗೊಳಿಸಲು ನ್ಯಾಯಾಂಗವು ಕೂಡಲೇ ಮಧ್ಯಪ್ರವೇಶ ಮಾಡಬೇಕೆಂದು ಅಬ್ದುಲ್ ಮಜೀದ್ ಮೈಸೂರು ಆಗ್ರಹಿಸಿದ್ದಾರೆ.


ಒಂದು ವೇಳೆ ರಾಜ್ಯ ಸರ್ಕಾರ ಸಂಘಪರಿವಾರ ಕಾರ್ಯಕರ್ತರ ಕೇಸ್ ಗಳನ್ನು ವಾಪಸ್ ಪಡೆದರೆ ಅದನ್ನು ಎಸ್‌ ಡಿಪಿಐ ನ್ಯಾಯಲಯದಲ್ಲಿ ಪ್ರಶ್ನಿಸಲಿದೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -