Home ಟಾಪ್ ಸುದ್ದಿಗಳು ಕೆಂಪಣ್ಣ ಕಾಂಗ್ರೆಸ್ ಏಜೆಂಟರಾಗಿದ್ದರೆ, ಮುಖ್ಯಮಂತ್ರಿಗಳು ಅವರನ್ನು ಭೇಟಿ ಮಾಡಿದ್ದು ಯಾಕೆ?: ಡಿ.ಕೆ.ಶಿವಕುಮಾರ್

ಕೆಂಪಣ್ಣ ಕಾಂಗ್ರೆಸ್ ಏಜೆಂಟರಾಗಿದ್ದರೆ, ಮುಖ್ಯಮಂತ್ರಿಗಳು ಅವರನ್ನು ಭೇಟಿ ಮಾಡಿದ್ದು ಯಾಕೆ?: ಡಿ.ಕೆ.ಶಿವಕುಮಾರ್

ಬೆಂಗಳೂರು: ಗುತ್ತಿಗೆದಾರರ ಸಂಘದ ಅಧ್ಯಕ್ಷರು ಕಳೆದ ಒಂದು ವರ್ಷದಿಂದ ನನ್ನನ್ನಾಗಲಿ, ಸಿದ್ದರಾಮಯ್ಯ ಅವರನ್ನಾಗಲಿ ಭೇಟಿ ಮಾಡಿರಲಿಲ್ಲ. ಆದರೆ ನಿನ್ನೆ ವಿರೋಧ ಪಕ್ಷದ ನಾಯಕರನ್ನು ಭೇಟಿ ಮಾಡಿದ್ದಾರೆ. ಇದಕ್ಕೂ ಮುನ್ನ ಕೆಲವು ತಿಂಗಳ ಹಿಂದೆ ಅವರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದರು. ಕೆಂಪಣ್ಣ ಅವರು ಕಾಂಗ್ರೆಸ್ ಏಜೆಂಟರಾಗಿದ್ದರೆ, ಮುಖ್ಯಮಂತ್ರಿಗಳು ಅವರನ್ನು ಭೇಟಿ ಮಾಡಿದ್ದು ಯಾಕೆ? ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ತಮ್ಮ ಅನುಕೂಲಕ್ಕೆ ತಕ್ಕಂತೆ ಮಾತನಾಡುವುದು ಇದು ಹೊಸತೇನಲ್ಲ. ಚಾಮರಾಜನಗರ ರೈತ ಸಂಘದವರು ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರ ವಿಚಾರವಾಗಿ ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ನನಗೂ ಮಾಹಿತಿ ನೀಡಿದ್ದಾರೆ ಎಂದರು.

ಬಿಜೆಪಿಯವರು 7-8 ಕಡೆಗಳಲ್ಲಿ ಜನೋತ್ಸವ ಆಚರಣೆ ಮಾಡುತ್ತಿದ್ದು, ಅವರು ಮಾಡಲಿ. ನಾವು ಕೂಡ ಅವರ ಭ್ರಷ್ಟೋತ್ಸವವನ್ನು ಆಚರಿಸುತ್ತೇವೆ. ಗುತ್ತಿಗೆದಾರರು ಸರ್ಕಾರದ ಭ್ರಷ್ಟಾಚಾರ, ಕಿರುಕುಳ ವಿಚಾರ ತಿಳಿಸಿದಾಗ ವಿರೋಧ ಪಕ್ಷವಾಗಿ ಧ್ವನಿ ಎತ್ತುವುದು ನಮ್ಮ ಕರ್ತವ್ಯ. ನಾವು ಈ ರಾಜ್ಯದ ಅಭಿವೃದ್ಧಿ ಪರ ಇರಬೇಕಲ್ಲವೆ? ಎಂದು ಪ್ರಶ್ನಿಸಿದರು.

ಪೊಲೀಸ್ ಇಲಾಖೆ ನೇಮಕಾತಿ ಅಕ್ರಮ ನಂತರ ಈಗ ಕೆಪಿಟಿಸಿಎಲ್ ನೇಮಕಾತಿ ಅಕ್ರಮ ಹೊರಬರುತ್ತಿದೆ. ಶಿಕ್ಷಣ ಇಲಾಖೆ ಅಕ್ರಮವೂ ಹೊರಬರುತ್ತಿದೆ. ಪೊಲೀಸ್ ನೇಮಕಾತಿ ಅಕ್ರಮದಲ್ಲಿ ಬಂಧಿತರ ಹೇಳಿಕೆಗಳನ್ನು ಯಾಕೆ ಬಿಡುಗಡೆ ಮಾಡುತ್ತಿಲ್ಲ? ಕೇವಲ ಕೆಲವು ಅಧಿಕಾರಿಗಳು ಹಾಗೂ ಅಭ್ಯರ್ಥಿಗಳನ್ನು ಮಾತ್ರ ಬಲಿ ಪಡೆಯುತ್ತಿದ್ದಾರೆ. ಈ ಅಕ್ರಮಕ್ಕೆ ಕುಮ್ಮಕ್ಕು ನೀಡಿರುವ ಮಂತ್ರಿಗಳ ರಕ್ಷಣೆ ಮಾಡುತ್ತಿದ್ದಾರೆ ಎಂದು ಡಿಕೆಶಿ ಆರೋಪಿಸಿದರು.

ಬೆಳಗಾವಿ ಗುತ್ತಿಗೆದಾರ ಸಂತೋಷ್ ಪಾಟೀಲ್ ಅವರ ಕುಟುಂಬಸ್ಥರು ನ್ಯಾಯಾಲಯದಲ್ಲಿ ಮೇಲರ್ಜಿ ಹಾಕಿದ್ದಾರೆ. ಅವರು ಹಾಕಿದ್ದು ಯಾಕೆ? ಪ್ರಕರಣದಲ್ಲಿ ಆರೋಪಿ ವಿರುದ್ಧ ಎಫ್ ಐಆರ್ ದಾಖಲಿಸುವ ಮುನ್ನವೇ ಅವರು ನಿರ್ದೋಷಿಯಾಗಲಿದ್ದಾರೆ ಎಂದು ಯಡಿಯೂರಪ್ಪ, ಮುಖ್ಯಮಂತ್ರಿ ಬೊಮ್ಮಾಯಿ ಹಾಗೂ ಗೃಹ ಸಚಿವ ಅರಗ ಜ್ಞಾನೇಂದ್ರ ಪ್ರಮಾಣಪತ್ರ ನೀಡಿದ್ದರು. ಆಗ ಯಾವ ಪೊಲೀಸ್ ಅಧಿಕಾರಿ ನ್ಯಾಯ ಒದಗಿಸಿಕೊಡುತ್ತಾರೆ ಎಂದು ಕೇಳಿದರು.

ರೇಪ್ ಪ್ರಕರಣದಲ್ಲೂ ತನಿಖೆಗೂ ಮುಂಚಿತವಾಗಿ ಆರೋಪಿಗೆ ಕ್ಲೀನ್ ಚಿಟ್ ನೀಡಿದ್ದರು. ನಂತರ ಸುಪ್ರೀಂ ಕೋರ್ಟ್ ಅದಕ್ಕೆ ತಡೆಯಾಜ್ಞೆ ನೀಡಿದೆ. ಜತೆಗೆ ಇದೇ ಮಾಜಿ ಮಂತ್ರಿಗಳು ಸಹಕಾರಿ ಬ್ಯಾಂಕುಗಳಿಗೆ ರೂ. 600 ಕೋಟಿಗೂ ಹೆಚ್ಚು ಹಣವನ್ನು ಪಾವತಿಸಬೇಕು ಎಂಬ ವಿಚಾರವನ್ನು ಕಾಂಗ್ರೆಸ್ ನಾಯಕರು ಬಹಿರಂಗಪಡಿಸಿದರು. ಆ ಬಗ್ಗೆ ಸಚಿವ ಎಸ್.ಟಿ. ಸೋಮಶೇಖರ್ ಅವರಾಗಲಿ ಮುಖ್ಯಮಂತ್ರಿಗಳಾಗಲಿ ಯಾಕೆ ಮಾತನಾಡುತ್ತಿಲ್ಲ? ಎಂದು ಪ್ರಶ್ನಿಸಿದರು.

ಮುಳುಗುಂದ್ ಅವರಿಗೆ ಸಿಬಿಐ ನೋಟೀಸ್ ನೀಡಿರುವ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ವಿಜಯ್ ಮುಳಗುಂದ್ ಅವರು ಪಕ್ಷದ ಕಾರ್ಯದರ್ಶಿ. ನನ್ನ ಆಪ್ತ. ಅವರೊಬ್ಬರಿಗೆ ಮಾತ್ರ ನೀಡಿಲ್ಲ. ನನ್ನ ಜತೆ ವ್ಯಾಪಾರ ವಹಿವಾಟು ಮಾಡಿರುವ, ಆಪ್ತರ ಪೈಕಿ 70-80 ಜನರಿಗೆ ನೀಡಿದ್ದಾರೆ. ನಾನು ಇದನ್ನು ಕಾನೂನು ಪ್ರಕಾರ ಎದುರಿಸಬೇಕು ಎಂದು ಮೌನವಾಗಿದ್ದೇನೆ. ಈ ಪ್ರಕರಣಗಳ ವಿರುದ್ಧ ಹೈಕೋರ್ಟ್ ನಲ್ಲಿ ಅರ್ಜಿ ಹಾಕಿದ್ದೇನೆ. ಜತೆಗೆ ಚುನಾವಣೆ ನಡೆಯುವವರೆಗೂ ನನಗೆ ಕಾಲಾವಕಾಶ ನೀಡಿ ನಂತರ ಮುಂದೆ ಎದುರಿಸುತ್ತೇವೆ ಎಂದು ಮನವಿ ಮಾಡಿದ್ದೇನೆ. ಬಿಜೆಪಿಯ ಶಾಸಕರು ಮಂತ್ರಿಗಳ ಅಕ್ರಮ ಆಸ್ತಿಗಳನ್ನು ತೆಗೆಯಲಿ. ಅವರ ಆಸ್ತಿ ಎಷ್ಟಿತ್ತು, ಅವರ ಮಕ್ಕಳು, ಕಂಪನಿಗಳ ಆಸ್ತಿ ಎಷ್ಟಾಗಿದೆ ಎಂದು ತನಿಖೆ ಮಾಡಿಸಲಿ. ನನ್ನ ಬಳಿಯು ಮಾಹಿತಿ ಇದೆ. ಸಮಯ ಬರಲಿ ಮಾತನಾಡುತ್ತೇನೆ’ ಎಂದು ತಿಳಿಸಿದರು.

ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ಈ ವಿಚಾರವಾಗಿ ನನಗೆ ಮಾಹಿತಿ ಇಲ್ಲ. ಕಾನೂನು ಸ್ಥಿತಿಗತಿ ಬಗ್ಗೆ ತೇಳಿದುಕೊಳ್ಳಬೇಕು. ಮಾಧ್ಯಮಗಳ ವರದಿ ಮಾತ್ರ ನನಗೆ ಗೊತ್ತಿದೆ. ಯಾರೂ ನನ್ನ ಬಳಿ ಬಂದು ಈ ಬಗ್ಗೆ ಮಾತನಾಡಿಲ್ಲ’ ಎಂದರು.

40% ಕಮಿಷನ್ ವಿಚಾರದಲ್ಲಿ ಸಾಕ್ಷಿ ಕೇಳಿರುವ ನಳೀನ್ ಕುಮಾರ್ ಅವರ ಬಗ್ಗೆ ಕೇಳಿದಾಗ, ‘ಕೆಂಪಣ್ಣ ಅವರು ಪ್ರಧಾನಿಗೆ ಪತ್ರ ಬರೆದು 1 ವರ್ಷ ಆಗಿದೆ. ನೀವು ಸತ್ಯವಂತರಾಗಿದ್ದರೆ ನ್ಯಾಯಾಂಗ ತನಿಖೆ ಮಾಡಿಸಿ. ಭಯ ಯಾಕೆ?’ ಎಂದು ಪ್ರಶ್ನಿಸಿದರು.

ಇಷ್ಟೆಲ್ಲಾ ಆದರೂ ಬಿಜೆಪಿ ಸರ್ಕಾರ ಭಂಡತನ ಪ್ರದರ್ಶಿಸುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಬಿಜೆಪಿ ನಾಯಕರಾದ ವಿಶ್ವನಾಥ್, ಯತ್ನಾಳ್ ಅವರೇ ಸರ್ಕಾರದ ಅಕ್ರಮಗಳ ಬಗ್ಗೆ ಮಾತನಾಡಿದ್ದು, ಆ ಬಗ್ಗೆ ಬೊಮ್ಮಾಯಿ ಅವರು ಯಾಕೆ ಮಾತನಾಡುತ್ತಿಲ್ಲ. ಅವರ ಆರೋಪ ಸುಳ್ಳಾಗಿದ್ದರೆ ಅವರ ವಿರುದ್ಧ ಪ್ರಕರಣ ಯಾಕೆ ದಾಖಲಿಸುತ್ತಿಲ್ಲ?’ ಎಂದು ಪ್ರಶ್ನಿಸಿದರು.

ಚುನಾವಣೆ ಸಮೀಪಿಸುತ್ತಿದ್ದಂತೆ ನಿಮ್ಮನ್ನು ಟಾರ್ಗೆಟ್ ಮಾಡಲಾಗುತ್ತಿದೆಯೇ ಎಂಬ ಪ್ರಶ್ನೆಗೆ, ‘ಬಿಜೆಪಿಯ ಆಂತರಿಕ ವಿಚಾರದ ಬಗ್ಗೆ ಅಲ್ಲಿರುವವರೇ ನಮಗೆ ಮಾಹಿತಿ ನೀಡುತ್ತಿದ್ದಾರೆ. ಈ ದೇಶದ ಕಾನೂನಿನ ಬಗ್ಗೆ ನನಗೆ ಗೌರವವಿದೆ. ನನ್ನ ಪ್ರಾಮಾಣಿಕತೆ ಬಗ್ಗೆ ನನಗೆ ನಂಬಿಕೆ ಇದೆ. ಅವರು ಏನಾದರೂ ಮಾಡಿಕೊಳ್ಳಲಿ. ನಾನು ಎಲ್ಲವನ್ನು ಎದುರಿಸಲು ಸಿದ್ಧ. ನನ್ನ ತಾಯಿಯನ್ನು ನನ್ನ ಬೇನಾಮಿ ಎಂದು ಆಸ್ತಿ ಸೀಸ್ ಮಾಡಿದ್ದಾರೆ. ತಾಯಿ ಆಸ್ತಿಯನ್ನು ಮಗನ ಬೇನಾಮಿ ಎಂದರೆ ಇದಕ್ಕಿಂತ ಷಡ್ಯಂತ್ರ ಬೇರೆ ಏನಿದೆ? ಕಿರುಕುಳಕ್ಕೂ ಒಂದು ಮಿತಿ ಇರಬೇಕು. ಅವರು ದುರುಪಯೋಗಪಡಿಸಿಕೊಳ್ಳಲಿ. ನನ್ನ ಮೇಲೆ ಹಾಕಿರುವ ಎಲ್ಲ ಪ್ರಕರಣಗಳ ಪಟ್ಟಿ ಮಾಡಿಸಿದ್ದೇನೆ’ ಎಂದು ತಿಳಿಸಿದರು.

Join Whatsapp
Exit mobile version