Home ಟಾಪ್ ಸುದ್ದಿಗಳು ಹೆಗಡೆ ಕ್ಷಮೆ ಯಾಚಿಸದಿದ್ದರೆ ಮುಖಕ್ಕೆ ಮಸಿ ಬಳಿಯುತ್ತೇವೆ: ಕುರುಬ ಮುಖಂಡ

ಹೆಗಡೆ ಕ್ಷಮೆ ಯಾಚಿಸದಿದ್ದರೆ ಮುಖಕ್ಕೆ ಮಸಿ ಬಳಿಯುತ್ತೇವೆ: ಕುರುಬ ಮುಖಂಡ

ಗುಂಡ್ಲುಪೇಟೆ: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಹಗುರವಾಗಿ ಮಾತನಾಡಿರುವ ಸಂಸದ ಅನಂತಕುಮಾರ್ ಹೆಗಡೆ ಆದಷ್ಟು ಬೇಗ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ, ಹೋದ ಕಡೆಯಲ್ಲೆಲ್ಲಾ ಅವರ ಮುಖಕ್ಕೆ ಮಸಿ ಬಳಿಯುತ್ತೇವೆ ಎಂದು ಕುರುಬ ಸಮುದಾಯದ ಮುಖಂಡ ಕಲ್ಲಿಗೌಡನಹಳ್ಳಿ ಬಸವರಾಜು ಎಚ್ಚರಿಕೆ ನೀಡಿದ್ದಾರೆ.

ಸಿದ್ದರಾಮಯ್ಯ ರಾಜ್ಯದ ಅಹಿಂದ ನಾಯಕನಾಗಿದ್ದು, ಅಂಬೇಡ್ಕರ್ ತತ್ವ, ಸಿದ್ಧಾಂತ ಅಳವಡಿಸಿಕೊಂಡು ಅಧಿಕಾರ ನಡೆಸುತ್ತಿದ್ದಾರೆ. ಇವರ ವಿರುದ್ಧ ಮಾತನಾಡಿರುವುದು ಸರಿಯಲ್ಲ. ರಾಜ್ಯದ ಇಡೀ ಕುರುಬ ಸಮುದಾಯ ಸಿದ್ದರಾಮಯ್ಯ ಬೆಂಬಲಕ್ಕಿದೆ. ಮುಂಬರುವ ಚುನಾವಣೆಯಲ್ಲಿ ಅಹಿಂದ ಮತದಾರರು ಯಾವ ರೀತಿ ಪಾಠ ಕಲಿಸಬೇಕು ಎಂಬುದು ಗೊತ್ತಿದೆ ಎಂದು ಅವರು ತಿಳಿಸಿದ್ದಾರೆ.

ಕಳೆದ ನಾಲ್ಕು ವರ್ಷದಿಂದ ಅವಿತು ಕುಳಿತಿದ್ದ ಸಂಸದ ಅನಂತಕುಮಾರ್ ಹೆಗಡೆಗೆ ಚುನಾವಣೆ ಹೊಸ್ತಿಲಲ್ಲಿ ಧೈರ್ಯ ಬಂದಂತಾಗಿದೆ. ಕೇಂದ್ರದ ನಾಯಕನನ್ನು ಮೆಚ್ಚಿಸಲು ನಾಡಿನ ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ಧ ಅಸಂಬದ್ಧ ಪದ ಬಳಕೆ ಮಾಡುತ್ತಿದ್ದಾರೆ. ಕೂಡಲೇ ಇದನ್ನು ನಿಲ್ಲಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಅವರು ಸಂಸದರಾಗಿದ್ದರೂ ಮಾತಿನ ಮೇಲೆ ಹಿಡಿತವಿಲ್ಲದೆ ಕೀಳುಮಟ್ಟದ ಪದಬಳಕೆ ಮಾಡಿದ್ದಾರೆ. ಇದು ಅವರ ಪಕ್ಷದ ಸಂಸ್ಕೃತಿಯನ್ನು ತೋರಿಸುತ್ತದೆ. ಸಿಎಂ ವಿರುದ್ಧ ಮಾತನಾಡಲು ಬಿಜೆಪಿ ಯಾವ ನಾಯಕನಿಗೂ ನೈತಿಕತೆ ಇಲ್ಲ. ಇದನ್ನು ಕುರುಬ ಸಮುದಾಯ ಸಹಿಸುವುದಿಲ್ಲ ಎಂದು ಕುರುಬ ಸುಮದಾಯದ ಮುಖಂಡ ಹೇಳಿದ್ದಾರೆ.

Join Whatsapp
Exit mobile version