ನವದೆಹಲಿ: “ಶಿಕ್ಷಣ ವ್ಯವಸ್ಥೆಯನ್ನು ಆರ್‌ಎಸ್‌ಎಸ್ ತನ್ನ ನಿಯಂತ್ರಣಕ್ಕೆ ಪಡೆದರೆ ದೇಶ ಸರ್ವನಾಶವಾಗುತ್ತದೆ” ಎಂದು ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಟೀಕಿಸಿದರು.
ರಾಷ್ಟ್ರೀಯ ಶಿಕ್ಷಣ ನೀತಿ(ಎನ್‌ಇಪಿ) ವಿರೋಧಿಸಿ ‘ಇಂಡಿ’ ಕೂಟದ ಭಾಗವಾಗಿರುವ ವಿದ್ಯಾರ್ಥಿ ಸಂಘಟನೆ ಸೋಮವಾರ ದೆಹಲಿಯ ಜಂತರ್ ಮಂತರ್‌ನಲ್ಲಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
“ಇಂಡಿಯಾ ಮೈತ್ರಿಕೂಟದ ಸದಸ್ಯರಲ್ಲಿ ಸಿದ್ಧಾಂತಗಳು ಮತ್ತು ನೀತಿಗಳಲ್ಲಿ ಸ್ವಲ್ಪ ಮಟ್ಟದ ವ್ಯತ್ಯಾಸಗಳು ಇರಬಹುದು. ಆದರೆ, ಯಾವುದೇ ಕಾರಣಕ್ಕೂ ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ” ಎಂದು ಸ್ಪಷ್ಟಪಡಿಸಿದರು.
“ಒಂದು ಸಂಘಟನೆ ದೇಶದ ಭವಿಷ್ಯ ಮತ್ತು ಶಿಕ್ಷಣ ವ್ಯವಸ್ಥೆಯನ್ನು ನಾಶಪಡಿಸಲು ಬಯಸುತ್ತಿದೆ. ಆ ಸಂಘಟನೆಯ ಹೆಸರು ರಾಷ್ಟ್ರೀಯ ಸ್ವಯಂ ಸೇವಕ ಸಂಘ. ಒಂದು ವೇಳೆ ಶಿಕ್ಷಣ ವ್ಯವಸ್ಥೆ ಇವರ ಕೈಗೆ ಸಿಕ್ಕರೆ, ಈ ದೇಶ ಸರ್ವನಾಶವಾಗುತ್ತದೆ. ಇದು ಈಗಾಗಲೇ ನಿಧಾನವಾಗಿ ನಡೆಯುತ್ತಿದೆ. ಮುಂದೆ ದೇಶದಲ್ಲಿ ಯಾರಿಗೂ ಉದ್ಯೋಗವೇ ಸಿಗುವುದಿಲ್ಲ, ಅಲ್ಲಿಗೆ ದೇಶದ ಕಥೆ ಮುಗಿದಂತೆ” ಎಂದು ಗಾಂಧಿ ವಾಗ್ದಾಳಿ ನಡೆಸಿದರು.
“ಭಾರತದ ವಿಶ್ವವಿದ್ಯಾಲಯಗಳ ಕುಲಪತಿಗಳು ಆರ್‌ಎಸ್‌ಎಸ್‌ನ ಹಿಡಿತದಲ್ಲಿದ್ದಾರೆ ಎಂಬುದನ್ನು ವಿದ್ಯಾರ್ಥಿ ಸಂಘಟನೆಗಳು ವಿದ್ಯಾರ್ಥಿಗಳಿಗೆ ತಿಳಿಸಲೇಬೇಕು. ಮುಂಬರುವ ದಿನಗಳಲ್ಲಿ ರಾಜ್ಯಗಳ ವಿಶ್ವವಿದ್ಯಾಲಯಗಳ ಕುಲಪತಿಗಳನ್ನು ಆರ್‌ಎಸ್‌ಎಸ್ ಶಿಫಾರಸಿನ ಮೇಲೆಯೇ ನೇಮಕಾತಿ ಮಾಡುತ್ತಾರೆ. ನಾವಿದನ್ನು ತಡೆಯಬೇಕು” ಎಂದು ಅವರು ಮನವಿ ಮಾಡಿದರು.
ಕಳೆದ ವಾರ ಪ್ರಧಾನಿ ನರೇಂದ್ರ ಮೋದಿ ಸಂಸತ್ತಿನಲ್ಲಿ ಮಹಾ ಕುಂಭಮೇಳದ ಕುರಿತು ಮಾತನಾಡಿರುವುದನ್ನು ಪ್ರಸ್ತಾಪಿಸಿದ ರಾಹುಲ್ ಗಾಂಧಿ, “ಪ್ರಧಾನಿ ದೇಶದಲ್ಲಿರುವ ನಿರುದ್ಯೋಗ ಮತ್ತು ಹಣದುಬ್ಬರದ ಕುರಿತು ಮಾತನಾಡಬೇಕಿತ್ತು. ಆದರೆ ಅವರು ಈ ಕುರಿತು ಒಂದು ಮಾತನ್ನೂ ಆಡುವುದಿಲ್ಲ. ದೇಶದ ಎಲ್ಲ ಸಂಪನ್ಮೂಲಗಳನ್ನು ಅದಾನಿ, ಅಂಬಾನಿ ಮತ್ತು ಸಂಸ್ಥೆಗಳನ್ನು ಆರ್‌ಎಸ್‌ಎಸ್‌ಗೆ ಹಸ್ತಾಂತರಿಸುವುದೇ ಅವರು ಅನುಸರಿಸುತ್ತಿರುವ ಆಡಳಿತದ ಮಾದರಿ” ಎಂದು ಚಾಟಿ ಬೀಸಿದರು.