Home ಟಾಪ್ ಸುದ್ದಿಗಳು ಡಾಲಿ ಚಾಯ್ ವಾಲಾ ಮಂಗಳೂರಿನಲ್ಲಿರುತ್ತಿದ್ದರೆ ಆತನ ಸ್ಟಾಲ್ ಕೂಡ ಬುಲ್ಡೋಜ್ ಆಗುತ್ತಿತ್ತು : ನಟ ರಾಜ್...

ಡಾಲಿ ಚಾಯ್ ವಾಲಾ ಮಂಗಳೂರಿನಲ್ಲಿರುತ್ತಿದ್ದರೆ ಆತನ ಸ್ಟಾಲ್ ಕೂಡ ಬುಲ್ಡೋಜ್ ಆಗುತ್ತಿತ್ತು : ನಟ ರಾಜ್ ಬಿ ಶೆಟ್ಟಿ

ಮಂಗಳೂರು: ಮಂಗಳೂರಿನಲ್ಲಿ ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನ ಟ್ರಸ್ಟ್ ಆಯೋಜಿಸಿರುವ ರಸ್ತೆ ಬದಿಯ ಆಹಾರ ಮೇಳ ಮತ್ತು ಅದರ ಉದ್ಘಾಟನೆಗೆ ನಾಗ್ಪುರದ ಡಾಲಿ ಚಾಯ್ ವಾಲಾ ಅವರನ್ನು ಕರೆಸಿಕೊಂಡಿರುವುದಕ್ಕೆ ಖ್ಯಾತ ನಟ ರಾಜ್ ಬಿ ಶೆಟ್ಟಿ ಅವರು ಟಾಂಗ್ ನೀಡಿದ್ದಾರೆ.

ಈ  ಬಗ್ಗೆ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿರುವ ಅವರು, ಬೀದಿ ಬದಿಯ ಟೀ ಮಾರಾಟಗಾರ ಡಾಲಿ ಚಾಯ್ ವಾಲಾ ಅವರನ್ನು ಮಂಗಳೂರಿನಲ್ಲಿ ಸಂಭ್ರಮಿಸಲಾಗಿದೆ, ಕೆಳ ತಿಂಗಳ ಹಿಂದೆ ಅದೇ ಮಂಗಳೂರು ನಗರದ ಬೀದಿ ಬದಿ ವ್ಯಾಪಾರಿಗಳ ಸ್ಟಾಲ್ ಗಳನ್ನು ಬುಲ್ಡೋಜರ್ ಕಾರ್ಯಾಚರಣೆ ಮೂಲಕ ತೆರವು ಗೊಳಿಸಲಾಗಿತ್ತು, ಅದೃಷ್ಟಕ್ಕೆ ಡಾಲಿ ಚಾಯ್ ವಾಲಾ ಮಂಗಳೂರಿಗನಲ್ಲ, ಒಂದು ವೇಳೆ ಆತ ಮಂಗಳೂರಿನಲ್ಲಿರುತ್ತಿದ್ದರೆ ಆತನ ಸ್ಟಾಲ್ ಕೂಡ ಬುಲ್ಡೋಜ್ ಆಗುತ್ತಿತ್ತು ಎಂದು ಬರೆದುಕೊಂಡಿದ್ದಾರೆ.

ಮಂಗಳೂರಿನ ಲೇಡಿಹಿಲ್ ಪ್ರದೇಶದಲ್ಲಿ ಕಳೆದ ಶನಿವಾರದಿಂದ ಆಹಾರ ಮೇಳ ಆಯೋಜನೆ ಆಗಿದೆ. ಬಿಜೆಪಿ ನಾಯಕರ ನೇತೃತ್ವದ ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನ ಟ್ರಸ್ಟ್ ಆಯೋಜಿಸಿರುವ ಆಹಾರ ಮೇಳದ ಪ್ರಮುಖ ಆಕರ್ಷಣೆಯಾಗಿ ನಾಗ್ಪುರದ ಖ್ಯಾತ ಚಾಯ್ ವಾಲಾ ಡಾಲಿ ಅವರನ್ನು ಕರೆಸಿಕೊಳ್ಳಲಾಗಿತ್ತು.

ಕೆಲ ಸಮಯದ ಹಿಂದೆ ಮಂಗಳೂರು ಮಹಾನಗರ ಪಾಲಿಕೆಯ ಬಿಜೆಪಿ ಆಡಳಿತ ನಗರದ ಬೀದಿ ಬದಿ ವ್ಯಾಪಾರಸ್ಥರನ್ನು ತೆರವು ಮಾಡುವ ಕಾರ್ಯಾಚರಣೆ ನಡೆಸಿತ್ತು. ಟೈಗರ್ ಕಾರ್ಯಾಚರಣೆಯ ಹೆಸರಿನಲ್ಲಿ ಬುಲ್ಡೋಜರ್ ಮೂಲಕ ಬೀದಿ ಬದಿಯ  ಹಲವು ಸ್ಟಾಲ್ ಗಳನ್ನು ತೆರವು ಮಾಡಿತ್ತು. ಬೀದಿ ಬದಿ ವ್ಯಾಪಾರವನ್ನು ತೆರವುಗೊಳಿಸಿರುವ ಮನಪಾ, ಬೀದಿ ಬದಿಯಲ್ಲಿ ನಡೆಸುವ ಆಹಾರ ಮೇಳಕ್ಕೆ ಅವಕಾಶ ಕಲ್ಪಿಸಿರುವುದು ಸಾರ್ವಜನಿಕ ವಲಯ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಟೀಕೆ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ.

ಬಡವರ ಬೀದಿ ಬದಿ ವ್ಯಾಪಾರವನ್ನು ತೆರವು ಮಾಡಿ ಶ್ರೀಮಂತರು ನಡೆಸುವ ರಸ್ತೆ ಬದಿ ಆಹಾರ ಮೇಳಕ್ಕೆ ಅವಕಾಶ ನೀಡಿರುವುದು ಮತ್ತು ಅದರಿಂದ ಸಾರ್ವಜನಿಕರಿಗೆ ಅಡಚಣೆ ಆಗುತ್ತಿರುವ ಬಗ್ಗೆ ಟೀಕೆಗಳು ವ್ಯಕ್ತವಾಗಿವೆ.

Join Whatsapp
Exit mobile version