ನವದೆಹಲಿ: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಕೇಂದ್ರವು ರಾಜ್ಯದ ಬಾಕಿಯನ್ನು ಪಾವತಿಸದಿದ್ದರೆ, ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಪಾವತಿಸುವುದನ್ನು ನಿಲ್ಲಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಜಾರ್ಗ್ರಾಮ್ ಜಿಲ್ಲೆಯಲ್ಲಿ ಬುಡಕಟ್ಟು ಜನಾಂಗದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೇಂದ್ರವು ರಾಜ್ಯಗಳ ಬಾಕಿಯನ್ನು ಪಾವತಿಸಬೇಕು ಅಥವಾ ಅಧಿಕಾರದಿಂದ ಕೆಳಗಿಳಿಯಬೇಕು ಎಂದು ಹೇಳಿದರು.
ಕೇಂದ್ರವು ‘ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ’ (ನರೇಗಾ) ಅಡಿ ನೀಡಬೇಕಾದ ಅನುದಾನವನ್ನು ಬಿಡುಗಡೆ ಮಾಡುತ್ತಿಲ್ಲ. ಅದರ ವಿರುದ್ಧ ರಾಜ್ಯದ ಆದಿವಾಸಿಗಳು ಪ್ರತಿಭಟನೆ ನಡೆಸಬೇಕು ಎಂದು ಕರೆ ನೀಡಿದ್ದಾರೆ.
ನಮ್ಮ ಆರ್ಥಿಕ ಬಾಕಿಯನ್ನು ಪಾವತಿಸಲು ನಾವು ಕೇಂದ್ರದ ಮುಂದೆ ಭಿಕ್ಷೆ ಬೇಡಬೇಕೇ? ಎಂದು ಪ್ರಶ್ನಿಸಿರುವ ಅವರು ನರೇಗಾ ಯೋಜನೆಯಡಿ ನೀಡಬೇಕಾದ ಬಾಕಿ ಮೊತ್ತವನ್ನು ಪಶ್ಚಿಮ ಬಂಗಾಳ ರಾಜ್ಯಕ್ಕೆ ಕೇಂದ್ರ ಸರ್ಕಾರ ಪಾವತಿಸಬೇಕು . ನಮ್ಮ ಬಾಕಿಯನ್ನು ಪಾವತಿಸದಿದ್ದರೆ ಬಿಜೆಪಿ ಸರ್ಕಾರ ಅಧಿಕಾರದಿಂದ ಕೆಳಗಿಳಿಯಬೇಕಾಗುತ್ತದೆ ಎಂದು ಎಷ್ಷರಿಕೆ ನೀಡಿದರು.
ನರೇಗಾ, ಆವಾಸ್ ಯೋಜನೆ ಮತ್ತು ಗ್ರಾಮೀಣ ಸಡಕ್ ಯೋಜನೆಗಾಗಿ ಕೇಂದ್ರವು 17,996.32 ಕೋಟಿ ರೂಪಾಯಿ ಹಣವನ್ನು ನೀಡಬೇಕಿದೆ ಎಂದು ಅವರು ತಿಳಿಸಿದ್ದಾರೆ.