ICC T-20 ವಿಶ್ವಕಪ್ UAEಯಲ್ಲಿ ಮುಗಿದ ಬೆನ್ನಲ್ಲೇ ಮುಂದಿನ T-20 ವಿಶ್ವಕಪ್ ಟೂರ್ನಿಯ ಪಂದ್ಯಗಳು ನಡೆಯುವ ದಿನಾಂಕ ಮತ್ತು ಮೈದಾನಗಳ ಪಟ್ಟಿಯನ್ನು ICC ಪ್ರಕಟಿಸಿದೆ.
ಮುಂದಿನ ಚುಟುಕು ವಿಶ್ವಕಪ್ ಆಸ್ಟ್ರೇಲಿಯಾದಲ್ಲಿ ನಿಗದಿಯಾಗಿದ್ದು, 2022ರ ಅಕ್ಟೋಬರ್ 16ರಂದು ಟೂರ್ನಿಗೆ ಚಾಲನೆ ದೊರೆಯಲಿದೆ. ನವೆಂಬರ್ 13 ರಂದು ಫೈನಲ್ ಪಂದ್ಯಕ್ಕೆ ಮೆಲ್ಬರ್ನ್ ಕ್ರಿಕೆಟ್ ಗ್ರೌಂಡ್ (MCG) ವೇದಿಕೆಯಾಗಲಿದೆ.
ಬ್ರಿಸ್ಬೇನ್, ಗೀಲಾಂಗ್, ಹೋಬರ್ಟ್ ಮತ್ತು ಪರ್ತ್ ಸೇರಿದಂತೆ ಒಟ್ಟು 7 ನಗರಗಳಲ್ಲಿ ಪಂದ್ಯಗಳು ನಡೆಯಲಿದ್ದು, ಸೆಮಿಫೈನಲ್ ಪಂದ್ಯಗಳು ನವೆಂಬರ್ 9ರಂದು ಸಿಡ್ನಿ ಕ್ರಿಕೆಟ್ ಗ್ರೌಂಡ್ ಮತ್ತು ಅಡಿಲೇಡ್ ಓವಲ್’ನಲ್ಲಿ ನ.10 ರಂದು ನಡೆಯಲಿದೆ.2020ರ ಮಹಿಳಾ T-20 ವಿಶ್ವಕಪ್‌ನ ಫೈನಲ್ ಮೆಲ್ಬೋರ್ನ್ ನಲ್ಲಿ ನಡೆದಿತ್ತು. 86,174 ಸಾವಿರ ದಾಖಲೆಯ ಪ್ರೇಕ್ಷಕರು ಆ ಪಂದ್ಯವನ್ನು ವೀಕ್ಷಿಸಿದ್ದರು.
2022ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ T-20 ವಿಶ್ವಕಪ್ ಗೆ 8 ತಂಡಗಳು ನೇರ ಅರ್ಹತೆ ಪಡೆದಿದೆ. 2021ರ T-20 ವಿಶ್ವಕಪ್ ಚಾಂಪಿಯನ್ ಆಸ್ಟ್ರೇಲಿಯಾ, ರನ್ನರ್–ಅಪ್ ನ್ಯೂಜಿಲೆಂಡ್ ಜೊತೆಗೆ ಭಾರತ, ಅಫ್ಗಾನಿಸ್ತಾನ, ಬಾಂಗ್ಲಾದೇಶ, ಇಂಗ್ಲೆಂಡ್, ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಸೂಪರ್–12 ಹಂತಕ್ಕೆ ನೇರ ಪ್ರವೇಶ ಪಡೆದಿವೆ. ಉಳಿದ ನಾಲ್ಕು ತಂಡಗಳು ಗುಂಪು ಹಂತದಲ್ಲಿ ಸೆಣಸಿ ಅರ್ಹತೆ ಗಿಟ್ಟಿಸಲಿವೆ.
2012 ಮತ್ತು 2016ರಲ್ಲಿ ಚಾಂಪಿಯನ್ ಆಗಿರುವ ವೆಸ್ಟ್‌ಇಂಡೀಸ್, 2014ರಲ್ಲಿ ಪ್ರಶಸ್ತಿ ಗೆದ್ದಿದ್ದ ಶ್ರೀಲಂಕಾ, 2021ರ ಟೂರ್ನಿಯ ಸೂಪರ್-12 ಹಂತದಲ್ಲಿ ಆಡಿರುವ ನಮೀಬಿಯಾ ಮತ್ತು ಸ್ಕಾಟ್ಲೆಂಡ್ ಗುಂಪು–1ರಲ್ಲಿ ಸೆಣಸಲಿವೆ.