ಮೈಸೂರು : ನಗರದಲ್ಲಿ ಐಎಎಸ್ ವರ್ಸಸ್ ಐಎಎಸ್ ಅಧಿಕಾರಿಗಳ ಸಮರ ತಾರಕ್ಕೇರಿದ್ದು, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಬೇಸರ ವ್ಯಕ್ತಪಡಿಸಿ ರಾಜೀನಾಮೆ ನೀಡುವ ನಿರ್ಧಾರಕ್ಕೆ ಬಂದಿದ್ದಾರೆ.
ಈ ಕುರಿತಂತೆ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಯವರು ಕೆಲಸ ಮಾಡೋದಕ್ಕೆ ಬಿಡ್ತಾ ಇಲ್ಲ. ಇಂತಹ ದುರಂಹಂಕಾರಿ ಜಿಲ್ಲಾಧಿಕಾರಿ ಯಾರಿಗೂ ಬೇಡ. ನಾನಂತೂ ಕೆಲಸ ಮಾಡೋ ವ್ಯವಧಾನವನ್ನೇ ಕಳೆದುಕೊಂಡಿದ್ದೇನೆ ಎಂಬುದಾಗಿ ಭಾವೋದ್ವೇಗಕ್ಕೆ ಒಳಗಾಗಿ ಮಾತನಾಡಿದ್ದಾರೆ.
ಐಎಎಸ್ ಅಧಿಕಾರಿಯಿಂದಲೇ ಮತ್ತೊಬ್ಬ ಐಎಎಸ್ ಅಧಿಕಾರಿಗೆ ಕಿರುಕುಳ ನೀಡೋದು ಸರಿಯಲ್ಲ. ನನ್ನನ್ನು ಟಾರ್ಗೆಟ್ ಮಾಡುತ್ತಿರುವುದು ನೋವು ತಂದಿದೆ. ಈ ಬಗ್ಗೆ ರಾಜ್ಯದ ಮುಖ್ಯ ಕಾರ್ಯದರ್ಶಿಗೂ ಪತ್ರ ಬರೆದಿದ್ದೇನೆ. ಇಲ್ಲಿ ಕೆಲಸ ಮಾಡುವುದಕ್ಕಿಂತ ರಾಜೀನಾಮೆ ನೀಡಿ ಹೊರಗೆ ಹೋಗೋದೆ ಒಳ್ಳೆಯದು ಎಂದು ತಮ್ಮ ರಾಜೀನಾಮೆ ನಿರ್ಧಾರವನ್ನು ಹೊರ ಹಾಕಿದ್ದಾರೆ.
ಈ ಉಸಿರು ಗಟ್ಟಿದಂತ ವಾತಾವರಣದಲ್ಲಿ ಕೆಲಸ ಮಾಡೋದಕ್ಕೆ ಇಷ್ಟ ಇಲ್ಲದಂತೆ ಆಗಿದೆ. ನನ್ನನ್ನು ಟಾರ್ಗೆಟ್ ಮಾಡಿದ್ದರಿಂದ ನೋವು ಕೂಡ ಆಗಿದೆ. ಹೀಗಾಗಿ ಐಎಎಸ್ ಹುದ್ದೆಗೆ ರಾಜೀನಾಮೆ ನೀಡುವಂತ ನಿರ್ಧಾರವನ್ನು ಮಾಡಿದ್ದೇನೆ. ನಾನು ಸದಾ ಜಿಲ್ಲಾಧಿಕಾರಿಗೆ ಗೌರವ ಕೊಟ್ಟಿದ್ದೇನೆ. ಹಾಗಿದ್ದೂ ನನ್ನ ಮೇಲೆ ಹಠ, ಹಗೆ ಯಾಕೆ ಸಾಧಿಸುತ್ತಾ ಇದ್ದಾರೋ ನನಗೆ ಗೊತ್ತಿಲ್ಲ ಎಂದು ಶಿಲ್ಪಾ ನಾಗ್ ತಿಳಿಸಿದ್ದಾರೆ.