ಬೆಂಗಳೂರು: ಐಪಿಎಸ್ ರೂಪಾಗೆ ಮಾನಸಿಕ ಕಾಯಿಲೆ ಚಿಕಿತ್ಸೆಯ ಅಗತ್ಯವಿದೆ ಎಂದು ಐಎಎಸ್ ರೋಹಿಣಿ ವಾಗ್ದಾಳಿ ನಡೆಸಿದ್ದಾರೆ.
ಐಜಿಪಿ ಆಗಿರುವ ಐಪಿಎಸ್ ಅಧಿಕಾರಿ ರೂಪಾ ಆರೋಪಗಳ ಪಟ್ಟಿ ಸಂಬಂಧ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ ಅವರು, ಮಾನಸಿಕ ಕಾಯಿಲೆ ಬಹುದೊಡ್ಡ ಸಮಸ್ಯೆಯಾಗಿದ್ದು, ಇದಕ್ಕೆ ಔಷಧಿ ಹಾಗೂ ಕೌನ್ಸಿಲಿಂಗ್ ಅವಶ್ಯಕತೆಯಿದೆ. ಜವಾಬ್ದಾರಿ ಸ್ಥಾನದಲ್ಲಿರುವವರಿಗೆ ಈ ರೀತಿಯ ಸಮಸ್ಯೆ ಬಂದರೇ ತುಂಬಾ ಅಪಾಯ ಎಂದು ಕಿಡಿಕಾರಿದ್ದಾರೆ.
ಐಪಿಎಸ್ ರೂಪಾ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ನನ್ನ ಮೇಲೆ ಹಬ್ಬಿಸುತ್ತಿರುವ ಸುಳ್ಳು ಆಪಾದನೆಗಳೆಲ್ಲ ವ್ಯವಸ್ಥಿತ ಪಿತೂರಿಯಾಗಿದೆ. ಎಲ್ಲಾ ಕಡೆಯೂ ಹೀಗೆ ಸುಳ್ಳು ಆಪಾದನೆಗಳನ್ನು ಹಬ್ಬಿಸಲಾಗುತ್ತಿದೆ. ಸದ್ಯ ಈಗ ಕೆಲಸ ಮಾಡುತ್ತಿರುವ ಹಾಗೂ ನಾನ್ ಕೇಡರ್ ಪೋಸ್ಟ್‌ನಲ್ಲೂ ಕೂಡ ಈ ರೀತಿ ಮಾಡಲಾಗಿದ್ದು ಐಪಿಸಿ ಸೆಕ್ಷನ್ ಅಡಿಯಲ್ಲಿ ರೂಪಾ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ.
ರೂಪಾ ಯಾವಾಗಲೂ ಮಾಧ್ಯಮದ ಗಮನವನ್ನು ತನ್ನೆಡೆಗೆ ಸೆಳೆದುಕೊಳ್ಳಲು ಬಯಸುವ ವ್ಯಕ್ತಿ. ಆಕೆಯ ಸಾಮಾಜಿಕ ಜಾಲತಾಣದ ಪ್ರೊಫೈಲ್ ಅವಳ ಕೆಲಸದ ಪುರಾವೆಯಾಗಿದೆ.
ಯಾವಾಗಲೂ ಒಬ್ಬರನ್ನು ಗುರಿಯಾಗಿಸಿಕೊಳ್ಳುವುದೇ ಅವಳ ನೆಚ್ಚಿನ ಟೈಮ್ ಪಾಸ್ ಕೆಲಸವಾಗಿದೆ. ಫೋಟೊಗಳು ಸೋಷಿಯಲ್ ಮೀಡಿಯಾದಿಂದ ತೆಗೆದುಕೊಳ್ಳಲಾಗಿದೆ. ಆಕೆ ನಾನು ಯಾರಿಗೆ ಫೋಟೋ ಕಳಿಸಿದ್ದೆ ಎಂದು ಹೆಸರು ಹೇಳಲಿ ಎಂದು ಸವಾಲು ಹಾಕಿದರು.