ನವದೆಹಲಿ: ಮೋದಿ ಉಪನಾಮ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಮೆಟ್ಟಿಲೇರಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ಮರು ಅಫಿಡವಿಟ್ ಸಲ್ಲಿಸಿದ್ದು, ‘ತಾನು ಪ್ರಕರಣದಲ್ಲಿ ಯಾವುದೇ ತಪ್ಪು ಮಾಡಿಲ್ಲ. ಕ್ಷಮೆ ಕೇಳುವ ಪ್ರಮೇಯವೇ ಇಲ್ಲ’ ಎಂದು ಹೇಳಿದ್ದಾರೆ. ಅಲ್ಲದೇ, ಮೇಲ್ಮನವಿ ಅರ್ಜಿಯನ್ನು ಲೋಕಸಭೆ ಅಧಿವೇಶನ ಮುಗಿಯುವವರೆಗೆ ಬಾಕಿ ಉಳಿಸಿಕೊಳ್ಳಬೇಕು ಎಂದು ಕೋರಿದ್ದಾರೆ.
ಮಾಜಿ ಸಂಸದನ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸಿರುವ ಗುಜರಾತ್ ಶಾಸಕ ಪೂರ್ಣೇಶ್ ಮೋದಿ ಅವರು, ಸುಪ್ರೀಂಕೋರ್ಟ್ ಗೆ ನೀಡಿರುವ ಉತ್ತರದಲ್ಲಿ ರಾಹುಲ್ ಗಾಂಧಿ ಕ್ಷಮೆಯಾಚಿಸಲು ನಿರಾಕರಿಸಿದ್ದು ‘ಅಹಂಕಾರ’ವನ್ನು ತೋರಿಸುತ್ತದೆ ಎಂದು ನಿಂದನಾತ್ಮಕ ಪದ ಬಳಕೆ ಮಾಡಿದ್ದಾರೆ. ನಾನು ಕ್ಷಮೆ ಕೇಳಬೇಕು ಎಂದುಕೊಂಡಿದ್ದರೆ, ಈ ಹಿಂದೆಯೇ ಕೇಳುತ್ತಿದ್ದೆ. ಈಗ ಅದರ ಪ್ರಶ್ನೆಯೇ ಬರುವುದಿಲ್ಲ ಎಂದು ಅಫಿಡವಿಟ್ ನಲ್ಲಿ ಹೇಳಿದ್ದಾರೆ.