Home ಟಾಪ್ ಸುದ್ದಿಗಳು ಸುಮಲತಾ ಅವರನ್ನೂ ಭೇಟಿ ಆಗುತ್ತೇನೆ: ಕುಮಾರಸ್ವಾಮಿ

ಸುಮಲತಾ ಅವರನ್ನೂ ಭೇಟಿ ಆಗುತ್ತೇನೆ: ಕುಮಾರಸ್ವಾಮಿ

ಬೆಂಗಳೂರು: ಭೇಟಿ ಮಾಡುವ ಅವಶ್ಯಕತೆ ಬಂದರೆ ಸುಮಲತಾ ಅವರನ್ನು ಕೂಡಾ ಭೇಟಿ ಆಗುತ್ತೇನೆ. ತಪ್ಪೇನಿದೆ? ಎಂದು ಮಾಜಿ ಸಿಎಂ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.

ಮಾಜಿ ಪ್ರಧಾನಿ ಹೆಚ್.ಡಿ.ದೇವೆಗೌಡರ ನಿವಾಸಕ್ಕೆ ಭೇಟಿ ನೀಡಿದ್ದ ಕೇಂದ್ರದ ಕೃಷಿ ಹಾಗೂ ಬುಡಕಟ್ಟು ವ್ಯವಹಾರಗಳ ಖಾತೆ ಸಚಿವ ಅರ್ಜುನ್ ಮುಂಡಾ ಅವರನ್ನು ಬೀಳ್ಕೊಟ್ಟ ನಂತರ ಮಾಧ್ಯಮಗಳ ಜತೆ‌ ಕುಮಾರಸ್ವಾಮಿ ಮಾತನಾಡಿದರು.

ಮಂಡ್ಯ ಸಂಸದೆ ಸುಮಲತಾ ಬೆಂಬಲಿಗ ಸಚ್ಚಿದಾನಂದ ಭೇಟಿಯಾದ ಕುರಿತು ಪ್ರಶ್ನೆಗೆ,ಭೇಟಿ ಮಾಡುವ ಅವಶ್ಯಕತೆ ಬಂದರೆ ಸುಮಲತಾ ಅವರನ್ನು ಕೂಡಾ ಭೇಟಿ ಆಗುತ್ತೇನೆ. ತಪ್ಪೇನಿದೆ? ಸುಮಲತಾ ಅವರು ಬಿಜೆಪಿಯಲ್ಲಿ ಮುಂದುವರಿಯುವುದಾದರೆ ಮಿತ್ರಪಕ್ಷ ಬಿಜೆಪಿ ಪರವಾಗಿ ಅವರನ್ನು ಭೇಟಿ ಮಾಡುತ್ತೇನೆ. ನಾವೇನು‌ ಇಂತಹ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುತ್ತೇವೆ ಎಂದು ಹೇಳಿಲ್ಲ. ಇಂತಹವರಿಗೆ ತೊಂದ್ರೆ ಕೊಟ್ಟು ನಿಲ್ಲಬೇಕು ಅಂತಾನೂ ಇಲ್ಲ. ಈ ಬಗ್ಗೆ ಇನ್ನು ಚರ್ಚೆಯೇ ಆಗಿಲ್ಲ. ಇವೆಲ್ಲಾ ಪ್ರಾರಂಭಿಕ ಹಂತದಲ್ಲಿ ‌ಇದೆ. ಬಿಜೆಪಿ- ಜೆಡಿಎಸ್ ನಾಯಕರೆಲ್ಲ ಕೂತು ಸೌಹಾರ್ದಯುತವಾಗಿ ಕೆಲಸ ಮಾಡೋಕೆ ಎಲ್ಲರ ಜೊತೆಗೂ ಚರ್ಚೆ ನಡೆಸುತ್ತೇವೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ತಮ್ಮ ಶಾಸಕರನ್ನು ಕಾಂಗ್ರೆಸ್ ಆಮಿಷ ನೀಡಿ ಸೆಳೆಯುತ್ತಿದೆ ಎಂದು ಇದೇ ಸಂದರ್ಭ‌ ಆರೋಪಿಸಿದ ಹೆಚ್ಡಿಕೆ, ಕ್ಷೇತ್ರದ ಕೆಲಸಕ್ಕೆ ಹೋದರೆ ನಮ್ಮ ಶಾಸಕರನ್ನು ಕೂರಿಸಿಕೊಂಡು ಜೆಡಿಎಸ್ ಬಿಟ್ಟು ಕಾಂಗ್ರೆಸ್ ಗೆ ಬನ್ನಿ. ಏನ್ ಬೇಕೋ ಅದನ್ನು ಮಾಡಿಕೊಡುತ್ತೇವೆ ಎನ್ನುತ್ತಿದ್ದಾರೆ. ಎಷ್ಟು ಕೋಟಿ ಬೇಕೋ‌ ಅಷ್ಟು ಕೊಡ್ತೀವಿ, ಪಕ್ಷಕ್ಕೆ ಬನ್ನಿ ಅಂತಾರೆ. ಯಾವ ಕಾರಣಕ್ಕೆ ಇದನ್ನು ಮಾಡ್ತೀರಿ, ವಿರೋಧ ಪಕ್ಷ ಉಳಿಸೋಕೆ ಮಾಡ್ತಿರೋದಾ? ಜೆಡಿಎಸ್ ಮುಗಿಸಬೇಕು ಅಂತಲೇ ಇವರು ಇದೆಲ್ಲವನ್ನೂ ಮಾಡುತ್ತಿದ್ದಾರೆ ಎಂದು ದೂರಿದರು.

ಯಾವ ಪಕ್ಷದಿಂದ ಬೆಳೆದುಕೊಂಡು ಬಂದರು ಇವರು? ಯಾರ ನಾಯಕತ್ವದಲ್ಲಿ ಈ ಹಂತಕ್ಕೆ ಬಂದರು? ಯಾವುದಕ್ಕೂ ಅವರಿಗೆ ಕೃತಜ್ಞತೆ ಅನ್ನುವುದು ಇಲ್ಲ. ದೇವೇಗೌಡರು ಅವರ ಶತ್ರುಗಳಿಗೂ ಶಾಪ ಹಾಕಿಲ್ಲ ಎಂದು ಸಿಎಂ ಸಿದ್ದರಾಮಯ್ಯರನ್ನು ಪರೋಕ್ಷವಾಗಿ ಗುರಿಯಾಗಿಸಿ ಟೀಕಿಸಿದರು.

ಕ್ಷೇತ್ರ ಹಂಚಿಕೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಮಾಜಿ ಸಿಎಂ, ಡಿಎಸ್ ಮತ್ತು ಬಿಜೆಪಿ ಪಕ್ಷಗಳ ಮುಂದೆ ಒಟ್ಟಾಗಿ ಕೆಲಸ ಮಾಡಬೇಕು ಎನ್ನುವ ಉದ್ದೇಶ ಮಾತ್ರ ಇದೆ. ಅದರ ಬಗ್ಗೆ ಚರ್ಚೆ ಆಗಿದೆ. ಕ್ಷೇತ್ರಗಳ ಬಗ್ಗೆ ಚರ್ಚೆ ಆಗಿಲ್ಲ ಎಂದು ಉತ್ತರಿಸಿದರು.

ಲೋಕಸಭೆಗೆ ನಿಲ್ಲುವ ವಿಚಾರದ ಬಗ್ಗೆಯೂ ಪ್ರತಿಕ್ರಿಯೆ ನೀಡಿದ ಅವರು, ನಾನು ನಿಲ್ಲುವ ತೀರ್ಮಾನ ಎಲ್ಲೂ ಮಾಡಿಲ್ಲ. ಸ್ನೇಹಿತರುಗಳು ಬಯಸುತ್ತಿದ್ದಾರೆ. ಚಿಕ್ಕಬಳ್ಳಾಪುರ, ತುಮಕೂರು, ಮಂಡ್ಯ, ಬೆಂಗಳೂರು ಗ್ರಾಮಾಂತರ ಅಂತ ಹೇಳುತ್ತಿದ್ದಾರೆ. ಮಾಧ್ಯಮಗಳಲ್ಲಿ ಕೂಡ ವರದಿಗಳು ಬರುತ್ತಿವೆ. ಸಮಯ ಬಂದಾಗ ಅದನ್ನು ಹೇಳೋಣ ಎಂದಿದ್ದಾರೆ.

Join Whatsapp
Exit mobile version