ಬೆಂಗಳೂರು: ಕರ್ನಾಟಕ ಸರ್ಕಾರ ಹಮ್ಮಿಕೊಂಡಿದ್ದ ಸಂವಿಧಾನ ಮತ್ತು ರಾಷ್ಟ್ರೀಯ ಐಕ್ಯತೆ ಸಮ್ಮೇಳನದಲ್ಲಿ ಭಾಷಣ ಮಾಡಲು ಭಾರತಕ್ಕೆ ಆಗಮಿಸಿದ್ದ ಭಾರತೀಯ ಮೂಲದ ವೆಸ್ಟ್‌ಮಿನಿಸ್ಟರ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ನಿತಾಶಾ ಕೌಲ್ ಅವರಿಗೆ ಕೇಂದ್ರ ಸರ್ಕಾರ ಪ್ರವೇಶ ನಿರಾಕರಿಸಿದೆ.
ಕರ್ನಾಟಕ ಸರ್ಕಾರ ಸಮ್ಮೇಳನದಲ್ಲಿ ಭಾಗವಹಿಸುವಂತೆ ತಮಗೆ ಆಹ್ವಾನ ನೀಡಿತ್ತು. ಎಲ್ಲಾ ಅಗತ್ಯ ದಾಖಲೆಗಳನ್ನು ಹೊಂದಿದ್ದರೂ ಭಾರತ ಸರ್ಕಾರ ಪ್ರವೇಶ ನಿರಾಕರಿಸಿದೆ ಎಂದು ಕೌಲ್ ಅವರು X ನಲ್ಲಿ ಪೋಸ್ಟ್ ಮಾಡಿದ್ದಾರೆ.
ತಾವು ಈ ಹಿಂದೆ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಟೀಕಿಸಿದ್ದರಿಂದ ತಮಗೆ ಪ್ರವೇಶ ನಿರಾಕರಿಸಲಾಗಿದೆ ಎಂದು ಕೌಲ್ ಹೇಳಿದ್ದಾರೆ.
ನನಗೆ ಯಾವುದೇ ಕಾರಣ ನೀಡದೇ ಪ್ರವೇಶ ನಿರಾಕರಿಸಲಾಗಿದೆ. ದೆಹಲಿಯಿಂದ ಆದೇಶ ಬಂದಿದೆ. ನಾವು ಏನೂ ಮಾಡಲು ಸಾಧ್ಯವಿಲ್ಲ ಎಂದು ಮಾತ್ರ ಹೇಳಿದ್ದಾರೆ. ನನ್ನ ಪ್ರಯಾಣ ಮತ್ತು ಲಾಜಿಸ್ಟಿಕ್ಸ್ ಅನ್ನು ಕರ್ನಾಟಕದಿಂದ ವ್ಯವಸ್ಥೆ ಮಾಡಲಾಗಿದೆ ಮತ್ತು ನನ್ನ ಬಳಿ ಅಧಿಕೃತ ಪತ್ರವಿದೆ. ನನಗೆ ಪ್ರವೇಶ ನಿರಾಕರಿಸಿರುವ ಬಗ್ಗೆ ದೆಹಲಿಯಿಂದ ಯಾವುದೇ ಸೂಚನೆ ಅಥವಾ ಮಾಹಿತಿಯನ್ನು ಮುಂಚಿತವಾಗಿ ನೀಡಿಲ್ಲ” ಪ್ರೊಫೆಸರ್ ಕೌಲ್ X ನಲ್ಲಿ ಬರೆದಿದ್ದಾರೆ.
ನಾನು ಬೆಂಗಳೂರಿಗೆ ಬಂದಿಳಿದ 24 ಗಂಟೆಯ ನಂತರ ಬ್ರಿಟಿಷ್ ಏರ್‌ವೇಸ್ ವಿಮಾನದ ಮೂಲಕ ನನ್ನನ್ನು ಲಂಡನ್‌ಗೆ ವಾಪಸ್ ಕಳುಹಿಸಲಾಗಿದೆ. ನಾನು ಲಂಡನ್‌ನಿಂದ ಬೆಂಗಳೂರಿಗೆ ವಿಮಾನದಲ್ಲಿ 12 ಗಂಟೆಗಳನ್ನು ಕಳೆದಿದ್ದೇನೆ. ವಲಸೆಯಲ್ಲಿ ಹಲವಾರು ಗಂಟೆಗಳ ಕಾಲ ನನ್ನನ್ನು ವಿಚಾರಣೆ ನಡೆಸಿದರು ಮತ್ತು 24 ಗಂಟೆಗಳ ನಂತರ ವಾಪಸ್ ಕಳುಹಿಸಿದರು ಎಂದು ಕೌಲ್ ಹೇಳಿದ್ದಾರೆ.