Home ಟಾಪ್ ಸುದ್ದಿಗಳು ಜಾತಿ ಜನಗಣತಿಗೆ ನನ್ನ ವಿರೋಧವಿಲ್ಲ, ಸರಿಯಾದ ಗಣತಿ ವ್ಯವಸ್ಥಿತವಾಗಿ ನಡೆಯಬೇಕೆಂದು ಬಯಸುತ್ತೇನೆ: ಡಿಕೆ ಶಿವಕುಮಾರ್

ಜಾತಿ ಜನಗಣತಿಗೆ ನನ್ನ ವಿರೋಧವಿಲ್ಲ, ಸರಿಯಾದ ಗಣತಿ ವ್ಯವಸ್ಥಿತವಾಗಿ ನಡೆಯಬೇಕೆಂದು ಬಯಸುತ್ತೇನೆ: ಡಿಕೆ ಶಿವಕುಮಾರ್

ಬೆಂಗಳೂರು: ನಾನು ಎಲ್ಲೂ ಜಾತಿಗಣತಿ ವಿರೋಧಿಸಿಲ್ಲ… ಸರಿಯಾದ ಗಣತಿ ತ್ಯಂತ ವ್ಯವಸ್ಥಿತವಾಗಿ ನಡೆಯಬೇಕೆಂದು ಬಯಸುತ್ತೇನೆ. ನನ್ನ ಮನೆಯಿಂದಲೇ ಜಾತಿಗಣತಿಯಾಗಲಿ ಎಂದು ಕರ್ನಾಟಕ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಕರ್ನಾಟಕದಲ್ಲಿ ಜಾತಿ ಗಣತಿ ಜಾರಿ ವಿಚಾರವಾಗಿ ಡಿ.ಕೆ. ಶಿವಕುಮಾರ್ ಹಾಗೂ ಬಿಜೆಪಿ ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ನಿನ್ನೆ ರಾಜ್ಯಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದ್ದಾಗಿ ಮಾಧ್ಯಮದವರು ಡಿಕೆ ಶಿವಕುಮಾರ್ ಅವರನ್ನು ಪ್ರಶ್ನಿಸಿದರು.

ಬೆಳಗಾವಿಯ ಸುವರ್ಣಸೌಧದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಶಿವಕುಮಾರ್, ಜಾತಿ ಗಣತಿ ಸಮೀಕ್ಷೆ ಸರಿಯಾಗಿ ನಡೆದಿಲ್ಲ ಎಂದು ನಮ್ಮ ಅನೇಕ ಶಾಸಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮನೆ, ಮನೆಗೆ ತೆರಳಿ ಸಮೀಕ್ಷೆ ನಡೆಸಿಲ್ಲ ಎಂದು ದೂರುಗಳು ಬಂದಿವೆ. ಎಲ್ಲಾ ಸಮುದಾಯಗಳು ಅವರ ಜನಸಂಖ್ಯೆಗೆ ಅನುಗುಣವಾಗಿ ತಮ್ಮ ಹಕ್ಕನ್ನು ಪಡೆಯಬೇಕು ಎಂದರು.

ಅಲ್ಪಸಂಖ್ಯಾತರು, ಪರಿಶಿಷ್ಟರು ಸೇರಿದಂತೆ ಎಲ್ಲರೂ ತಮ್ಮ ಜನಸಂಖ್ಯೆ ಅನುಗುಣವಾಗಿ ಹಕ್ಕು ಹಾಗೂ ಅನುದಾನ ಕೇಳುತ್ತಾರೆ. ಈ ಜಾತಿ ಗಣತಿಯನ್ನು ವೈಜ್ಞಾನಿಕವಾಗಿ ಮಾಡಲಾಗಿದೆಯೇ ಎಂಬ ವಿಚಾರವಾಗಿ ನಾವು ಸ್ಪಷ್ಟೀಕರಣ ಕೇಳಿದ್ದೇವೆ. ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ಮೇಲೆ ನಾವು ನಂಬಿಕೆ ಇಟ್ಟಿದ್ದೇವೆ ಎಂದರು. ಸಮಾಜದ ಎಲ್ಲಾ ವರ್ಗಗಳಿಗೆ ಸಾಮಾಜಿಕ ನ್ಯಾಯ ಒದಗಿಸಿಕೊಡುವ ಕಾಂಗ್ರೆಸ್ ಪಕ್ಷದ ಬದ್ಧತೆಗೆ ನಾನು ಬೆಂಬಲವಾಗಿ ನಿಲ್ಲುತ್ತೇನೆ. ಕೇಂದ್ರ ಸರಕಾರದ ವರ್ಗಿಕರಣದ ಅನ್ವಯ ನಾನು ಕೂಡ ಇತರೆ ಹಿಂದುಳಿದ ವರ್ಗದ ಸಮುದಾಯದ ನಾಯಕ. ಪಕ್ಷದ ಅಧ್ಯಕ್ಷನಾಗಿ ನಾನು ಎಲ್ಲಾ ವರ್ಗದ ಜನರನ್ನು ಸಮಾನವಾಗಿ ನೋಡಬೇಕು ಎಂದು ತಿಳಿಸಿದರು.

Join Whatsapp
Exit mobile version