ಬೆಂಗಳೂರು: ನನಗೆ ನಮ್ಮ ಪಕ್ಷದ ನಾಯಕರು ಸಂಸ್ಕಾರ ಕಲಿಸಿಕೊಟ್ಟಿದ್ದಾರೆ. ಬಿಜೆಪಿ ಯುವಕರನ್ನು ದಾರಿ ತಪ್ಪಿಸುತ್ತಿದೆ ಅಂತ ನಾನು ಕಳಕಳಿಯ ಮಾತನಾಡಿದ್ದೇನೆ ಎಂದು ಸಚಿವ ಶಿವರಾಜ್ ತಂಗಡಗಿ ಸ್ಪಷ್ಟನೆ ನೀಡಿದರು.
ಮೋದಿ ಮೋದಿ ಎಂದು ಘೋಷಣೆ ಕೂಗುವವರ ಕಪಾಳಕ್ಕೆ ಹೊಡೆಯಿರಿ ಎಂದು ಪ್ರಚೋದನಕಾರಿ ಹೇಳಿಕೆ ನೀಡಿದ ಸಚಿವ ಶಿವರಾಜ್ ತಂಗಡಗಿ ವಿರುದ್ಧ ಕೊಪ್ಪಳ ಜಿಲ್ಲೆಯ ಕಾರಟಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ನಡುವೆ, ತಮ್ಮ ಹೇಳಿಕೆಯನ್ನು ತಂಗಡಗಿ ಸಮರ್ಥಿಸಿಕೊಂಡಿದ್ದಾರೆ. ಉತ್ತರ ಕರ್ನಾಟಕ ಭಾಷೆಯಲ್ಲಿ ನಾನು ಭಾಷಣ ಮಾಡಿದ್ದೆ. ಬಿಜೆಪಿಯವರು ಯುವಕರ ದಾರಿ ತಪ್ಪಿಸುತ್ತಿದ್ದಾರೆ ಎಂದು ಹೇಳಿದ್ದೆ ಎಂದರು.
ನಾನು ಯಾವ ಕೆಟ್ಟ ಪದ ಬಳಕೆ ಮಾಡಿದ್ದೇನೆ ಹೇಳಿ? ಉದ್ಯೋಗ ಕೊಡುವುದರ ಬಗ್ಗೆ ಮಾತ್ರ ಬಿಜೆಪಿ ಉತ್ತರ ಕೊಡಲಿ ನೋಡೋಣ. ನಾನು ಮಾಡಿದ ಭಾಷಣ ಇನ್ನೊಮ್ಮೆ ಕೇಳಿ ಉತ್ತರ ಕೊಡಲಿ. ಭದ್ರಾ ಮೇಲ್ದಂಡೆ ಯೋಜನೆ 5300 ಕೋಟಿಯ ರಾಷ್ಟ್ರೀಯ ಯೋಜನೆ ಅಂತ ಘೋಷಣೆ ಮಾಡಿದ್ದಾರೆ. ಆ ಹಣ ಬಿಡುಗಡೆ ಮಾಡಿದ್ದಾರಾ? ಇದಕ್ಕೆ ಪ್ರಲ್ಹಾದ ಜೋಶಿ, ಬಸವರಾಜ ಬೊಮ್ಮಾಯಿ, ಸಿಟಿ ರವಿ ಉತ್ತರ ನೀಡಲಿ ಎಂದು ಹೇಳಿದ್ದಾರೆ.